Advertisement

ಮಂಗಳೂರು-ಮೈಸೂರು ಹಳಿ ವಿದ್ಯುದೀಕರಣಕ್ಕೆ ಹಸಿರು ನಿಶಾನೆ

09:05 AM Apr 28, 2019 | keerthan |

ಮಂಗಳೂರು: ರಾಜಧಾನಿಯಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮಂಗಳೂರು ಮಾರ್ಗದ ಮೈಸೂರು- ಹಾಸನ- ಮಂಗಳೂರು ಮಾರ್ಗ ವಿದ್ಯುದೀಕರಣ ಯೋಜನೆ ಎರಡು ಹಂತಗಳಲ್ಲಿ ಇದು ಶೀಘ್ರ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ.

Advertisement

ರೈಲ್ವೇ ಇಲಾಖೆಯ ಅಧೀನದಲ್ಲಿ ರುವ ಅಲಹಾಬಾದ್‌ನ ಸೆಂಟ್ರಲ್‌ ಆರ್ಗನೈಸೇಶನ್‌ ಫಾರ್‌ ರೈಲ್ವೇ ಎಲೆಕ್ಟ್ರಿಫಿಕೇಶನ್‌ ವಿಭಾಗವು ಇದನ್ನು ನಿರ್ವಹಿಸಲಿದ್ದು, ಸದ್ಯ ಸರ್ವೆ ನಡೆಸಿ ಪ್ರಾರಂಭಿಕ ಸಿದ್ಧತೆ ಕೈಗೊಳ್ಳುತ್ತಿದೆ.
316 ಕೋ.ರೂ. ಮೀಸಲು ರೈಲ್ವೇ ಮೂಲಗಳ ಪ್ರಕಾರ ಕೇಂದ್ರ ಬಜೆಟ್‌ನಲ್ಲಿ ಮೈಸೂರು- ಹಾಸನ-ಮಂಗಳೂರು ಮಾರ್ಗ ವಿದ್ಯುದೀಕರಣಕ್ಕೆ 316 ಕೋ.ರೂ. ಮೀಸಲಿಡಲಾಗಿದೆ. ಮಂಗಳೂರು-ಹಾಸನ ಕಾಮಗಾರಿ ಮೊದಲಿಗೆ ಆರಂಭಿಸಿ, ಬಳಿಕ ಹಾಸನ-ಮೈಸೂರು ಕೆಲಸ ಕೈಗೊಳ್ಳುವ ಸಾಧ್ಯತೆ ಇದೆ. ಜತೆಗೆ ಹಾಸನ -ಅರಸೀಕೆರೆ ಮಾರ್ಗವನ್ನೂ ವಿದ್ಯುದೀಕರಣಕ್ಕೆ ಪರಿಗಣಿಸಲಾಗಿದೆ. ಅಂತಿಮ ತೀರ್ಮಾನ ಪ್ರಕಟಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಡೀಲ್‌ನಿಂದ ಬಂಟ್ವಾಳ, ಕಬಕ ಪುತ್ತೂರು, ಎಡಮಂಗಲ, ಸುಬ್ರಹ್ಮಣ್ಯ ಘಾಟಿ, ಸಕಲೇಶಪುರ-ಹಾಸನ ಹಳಿಯು ವಿದ್ಯುದೀಕರಣಗೊಳ್ಳಬೇಕಿದೆ.

ಪರಿಸರ ಸೂಕ್ಷ್ಮ ಪ್ರದೇಶ
ಸುಬ್ರಹ್ಮಣ್ಯ – ಸಕಲೇಶಪುರ ಮಾರ್ಗವು ಪರಿಸರ ಸೂಕ್ಷ್ಮ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹೊಂದಿದೆ. ತಿರುವುಗಳು ಅಧಿಕವಿದ್ದು, ಸುರಕ್ಷಿತ ಯಾನದ ನೆಲೆಯಲ್ಲೂ ಇಲ್ಲಿ ಹೆಚ್ಚು ರೈಲು ಓಡಾಟಕ್ಕೆ ಅವಕಾಶವಿಲ್ಲ. ವೇಗವೂ ನಿಯಂತ್ರಿತ. ಹೀಗಾಗಿ ಇಲ್ಲಿ ಹಳಿ ವಿದ್ಯುದೀಕರಣ ಸವಾಲಿನ ಕಾರ್ಯ. ವಿದ್ಯುದೀಕರಣಗೊಂಡ ಬಳಿಕವೂ ಇಲ್ಲಿ ರೈಲು ಮಿತ ವೇಗದಲ್ಲೇ ಸಂಚರಿಸಬೇಕಿದೆ. ವಿದ್ಯುದೀಕರಣಗೊಂಡರೆ ಡೀಸೆಲ್‌ ಬಳಕೆಯಿಂದಾಗುವ ಪರಿಸರ ಮಾಲಿನ್ಯ ತಪ್ಪುತ್ತದೆ ಮತ್ತು ಖರ್ಚು ಕಡಿಮೆ ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್‌ ಹೆಗ್ಡೆ.  ಕೊಂಕಣ ರೈಲ್ವೇಯಲ್ಲಿ ಸುರತ್ಕಲ್‌ ಸಮೀಪದ ತೋಕೂರಿನಿಂದ ಮಹಾರಾಷ್ಟ್ರದ ರೋಹಾವರೆಗಿನ ಒಟ್ಟು 741 ಕಿ.ಮೀ. ಮಾರ್ಗದ ವಿದ್ಯು ದೀಕರಣ ನಡೆಯುತ್ತಿದೆ.

ದಕ್ಷಿಣ ರೈಲ್ವೇ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ನಡುವಣ 328 ಕಿ.ಮೀ. ಮಾರ್ಗದ ವಿದ್ಯುದೀಕರಣ ಈಗಾಗಲೇ ಮಂಗಳೂರು ಜಂಕ್ಷನ್‌ (ಕಂಕನಾಡಿ)ವರೆಗೆ ಪೂರ್ಣಗೊಂಡಿದ್ದು, ತೋಕೂರು ವರೆಗೆ ಮುಂದುವರಿಯ ಲಿದೆ. ಕರಾವಳಿಯ ಎರಡು ರೈಲ್ವೇ ಸಂಪರ್ಕ ಹಳಿಗಳು ಉನ್ನತಿಗೆ ಏರುತ್ತಿರುವಾಗಲೇ ಮೈಸೂರು-ಹಾಸನ-ಮಂಗಳೂರು ಮಾರ್ಗ ವಿದ್ಯುದೀಕರಣಕ್ಕೆ ನೈಋತ್ಯ ರೈಲ್ವೇ ಮುಂದಡಿ ಇಟ್ಟಿದೆ.

ಬೆಂಗಳೂರಿನಿಂದ ಮೈಸೂರು ವರೆಗೆ ಈಗಾಗಲೇ ವಿದ್ಯುದೀಕರಣಗೊಂಡಿದ್ದು, ಅಲ್ಲಿಂದ ಮಂಗಳೂರು ವರೆಗಿನ ಸುಮಾರು 310 ಕಿ.ಮೀ. ಮಾರ್ಗ ಬಾಕಿಯಿದೆ. ಈ ಪೈಕಿ ಮಂಗಳೂರು-ಹಾಸನ ವಿದ್ಯುದೀಕರಣಕ್ಕೆ ಮೊದಲ ಮಂಜೂರಾತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮಂಗಳೂರು- ಹಾಸನ ಮಂಜೂರು
ಮಂಗಳೂರು-ಹಾಸನ ರೈಲ್ವೇ ವಿದ್ಯುದೀಕರಣ ಯೋಜನೆಗೆ ಮಂಜೂರಾತಿ ದೊರಕಿದೆ. ಅಲಹಾಬಾದ್‌ನ ಸೆಂಟ್ರಲ್‌ ಆರ್ಗನೈಸೇಶನ್‌ ಫಾರ್‌ ರೈಲ್ವೇ ಎಲೆಕ್ಟ್ರಿಫಿಕೇಶನ್‌ ವಿಭಾಗವು ಇದರ ನಿರ್ವಹಿಸಲಿದೆ.
ಅಪರ್ಣಾ ಗರ್ಗ್‌, ರೈಲ್ವೇ ವ್ಯವಸ್ಥಾಪಕರು, ಮೈಸೂರು ವಿಭಾಗ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next