Advertisement

ಇತ್ಯರ್ಥವಾಗದೇ ಟೆಂಡರ್‌ ಇಲ್ಲ : ಇಂಧನ ಸಚಿವರ ಉತ್ತರ

03:35 AM Jul 04, 2017 | Karthik A |

ಸುಳ್ಯ: ಸುಳ್ಯಕ್ಕೆ 110 ಕೆವಿ ವಿದ್ಯುತ್‌ ಮಾರ್ಗ ಕಾಮಗಾರಿ ಆರಂಭಿಸಲು ಒಟ್ಟು 6.745 ಹೆಕ್ಟೇರ್‌ನಷ್ಟು ಅರಣ್ಯ ಭೂಮಿ ಬಿಡುಗಡೆಗಾಗಿ ಕೇಂದ್ರ ಸರಕಾರಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು 10.14 ಹೆಕ್ಟೇರ್‌ನಷ್ಟು ಎಂದು ಸೂಚಿಸಿರುವುದರಿಂದ ಪುನರ್‌ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಗಕ್ಕಾಗಿ ಅಗತ್ಯವಿರುವ ಅರಣ್ಯ ಭೂಮಿ ಬಿಡುಗಡೆಯಾದ ಬಳಿಕ ಮತ್ತು ನ್ಯಾಯಾಲಯದಲ್ಲಿ ಸಲ್ಲಿಸಿರುವ ವ್ಯಾಜ್ಯಗಳು ಇತ್ಯರ್ಥಗೊಂಡ ಅನಂತರ ನಿಯಮಾನುಸಾರ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾಮಗಾರಿ ಮುಂದುವರಿಯಲಿದೆ ಎಂದು ಮೆಸ್ಕಾಂ ಪರವಾಗಿ ಇಂಧನ ಸಚಿವರು ಮಾಹಿತಿ ನೀಡಿದ್ದಾರೆ. ತಾ|ನಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಸಮಸ್ಯೆಗೆ ಪ್ರತಿಯಾಗಿ ಅಗತ್ಯವಿರುವ ಬೇಡಿಕೆ ಕುರಿತಂತೆ ಸುಳ್ಯಕ್ಕೆ 110 ಕೆವಿ ವಿದ್ಯುತ್‌ ವಿತರಣೆ ಕೇಂದ್ರ, ನೆಟ್ಲ ಮೂಟ್ನೂರುನಿಂದ ಸುಳ್ಯಕ್ಕೆ 110 ಕೆವಿ ಲೈನ್‌ ಮಂಜೂರಾಗಿದ್ದರೂ ಕಾಮಗಾರಿ ಆರಂಭವಾಗದಿರುವ ಬಗ್ಗೆ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕ ಎಸ್‌. ಅಂಗಾರ ಅವರು ಇಂಧನ ಸಚಿವರನ್ನು ಪ್ರಶ್ನಿಸಿದರು.

Advertisement

ಮಾಡಾವು 110 ಕೆವಿ ಉಪಕೇಂದ್ರಕ್ಕೆ ಕಬಕದಿಂದ ಮಾಡಾವುವರೆಗಿನ 27 ಕಿ.ಮೀ. ಪ್ರಸರಣ ಮಾರ್ಗ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ 115 ಟವರ್‌ಗಳ ನಿರ್ಮಾಣವಾಗಬೇಕಾಗಿದೆ. ಈಗಾಗಲೇ 101 ಸ್ಟಬ್‌, 90 ಟವರ್‌ ಮತ್ತು 14.7 ಕಿ.ಮೀ. ಪ್ರಸಾರ ಮಾರ್ಗ ನಿರ್ಮಿಸುವ ಕಾರ್ಯಪ್ರಗತಿಯಲ್ಲಿದೆ. ಇದೇ ಮಾರ್ಗಕ್ಕೆ ಸಂಬಂಧಿಸಿ ಪುತ್ತೂರು ಸಿವಿಲ್‌ ನ್ಯಾಯಾಲಯದಲ್ಲಿ 2 ಆಕ್ಷೇಪಣೆ, 2 ಹೈಕೋರ್ಟ್‌ನಲ್ಲಿ ವ್ಯಾಜ್ಯಗಳಿವೆ ಎಂದರು.

90 ಟವರ್‌ಗಳ ನಿರ್ಮಾಣ
ಕಾಣಿಯೂರು ರಕ್ಷಿತಾರಣ್ಯ, ಮಾಡಾವು ಹೊಳೆ ಬದಿ, ಕೊಳ್ತಿಗೆ ಗ್ರಾಮಸರಹದ್ದು, ಸಿದ್ದಮೂಲೆ, ಪೆರ್ಲಂಪಾಡಿ ಗ್ರಾಮ, ಕೊರಂಬಡ್ಕ ಶಾಲಾ ಬದಿ, ಆನೆಗುಂಡಿ ರಕ್ಷಿತಾರಣ್ಯ, ಗಬಲಡ್ಕ, ಗುಂಡ್ಯಡ್ಕ, ಜಾಳ್ಸೂರು ಗ್ರಾಮ ಸರಹದ್ದು, ಅಡ್ಕಾರು ಕೋನಡ್ಕ ಬೈತಡ್ಕ, ಅಜ್ಜಾವರ ಪುತ್ತಿಲ, ಕಾಂತಮಂಗಲ ಮೂಲಕ ಸುಳ್ಯವರೆಗೆ ಒಟ್ಟು 90 ಟವರ್‌ಗಳನ್ನು ನಿರ್ಮಿಸಲಾಗುವುದು ಎಂದರು.

ಹೊಸ ಪ್ರಕ್ರಿಯೆ ಜಾರಿಯಲ್ಲಿ
ರೈತರ ರಬ್ಬರ್‌ ಮರಗಳಿಗೆ 4.2 ಕೋಟಿ ರೂ., ತೆಂಗು, ಅಡಿಕೆ ಮತ್ತಿತರ ಕಡಿತದ ಪರಿಹಾರವಾಗಿ 3.76 ಕೋ. ರೂ. ನೀಡಬೇಕಾಗಿದ್ದು, ಗುತ್ತಿಗೆದಾರರು 39 ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ. ಉಳಿದ ಮೊತ್ತ ವಿತರಣೆ ಪ್ರಕ್ರಿಯೆ ಜಾರಿಯಲ್ಲಿದೆ. ಮಾಡಾವು 110 ಕೆವಿ ಉಪಕೇಂದ್ರ ನಿರ್ಮಾಣದ ಪ್ರಗತಿಯಾಗದಿದ್ದರಿಂದ ಹಿಂದಿನ ಗುತ್ತಿಗೆ ರದ್ದುಪಡಿಸಿ ಹೊಸ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರಸರಣ ಮಾರ್ಗದ ಮಾಡಾವು ಕಟ್ಟೆಯಿಂದ ಸುಳ್ಯವರೆಗೆ 90 ಟವರ್‌ ನಿರ್ಮಾಣವಾಗಲಿದೆ. ಖಾಸಗಿ, ಸರಕಾರಿ ಜಮೀನು ಸರ್ವೆಗೆ ಟೆಂಡರ್‌ ಮೂಲಕ ಖಾಸಗಿ ಏಜೆನ್ಸಿ ನೇಮಿಸಿದ್ದು ಸರ್ವೆ ಆರಂಭಗೊಂಡಿದೆ. ಸರ್ವೆಗೆ ಸುಳ್ಯದಲ್ಲಿ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ ಎಂದರು.

ಗುತ್ತಿಗಾರು: ಸಬ್‌ಸ್ಟೇಷನ್‌
ಈ ಬಗ್ಗೆ ಗುತ್ತಿಗಾರಿನಲ್ಲಿ 33 ಕೆವಿ ಉಪಕೇಂದ್ರಕ್ಕಾಗಿ ಜಮೀನು ಮಂಜೂರಾಗಿದೆ. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳೂರಿನ ಮೇ ಜ್ಯೋತಿ ಇಲೆಕ್ಟ್ರಿಕಲ್ಸ್‌ ಗುತ್ತಿಗೆದಾರರಾಗಿ ಆಯ್ಕೆಯಾಗಿದ್ದು ಲೆಟರ್‌ ಆಫ್ ಇನ್‌ಟೆಂಟ್‌  (ಎಲ್‌ಓಐ) ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್‌ಓಐ ನೀಡಿದಲ್ಲಿಂದ 1 ವರ್ಷ ನಿರ್ವಹಿಸಲು ಕಾಲಾವವಕಾಶ ನೀಡಲಾಗುತ್ತದೆ ಎಂದು ಸಚಿವರು ಶಾಸಕರಿಗೆ ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next