Advertisement

ಬಸ್‌ ಪ್ರಯಾಣಕ್ಕೂ ಬರಲಿ ವಿದ್ಯುತ್‌ ಸಬ್ಸಿಡಿ ಸೌಲಭ್ಯ

06:00 AM Nov 28, 2018 | Team Udayavani |

ಬೆಂಗಳೂರು: ಗ್ರಾಮೀಣ ಭಾಗದ ಜನರನ್ನು ಸರ್ಕಾರಿ ಬಸ್‌ಗಳ ಕಡೆಗೆ ಆಕರ್ಷಿಸಲು “ಸಬ್ಸಿಡಿ ವಿದ್ಯುತ್‌’ ಮಾದರಿಯಲ್ಲೇ “ಸಬ್ಸಿಡಿ ಪ್ರಯಾಣ ದರ’ ವ್ಯವಸ್ಥೆಯನ್ನು ಯಾಕೆ ಜಾರಿಗೊಳಿಸಬಾರದು?! ಇಂಥದ್ದೊಂದು ಪ್ರಶ್ನೆ ಈಗ ಚರ್ಚೆಯಲ್ಲಿದೆ. ಮಂಡ್ಯ ಬಸ್‌ ದುರಂತ ಪ್ರಕರಣ ಈ ಚರ್ಚೆಗೆ ಮೂಲ ಕಾರಣವಾಗಿದೆ. ಅದರಲ್ಲೂ ಇತ್ತೀಚೆಗೆ ಖಾಸಗಿ ಬಸ್‌ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ತಜ್ಞರು ಈ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಕಡಿಮೆ ಪ್ರಯಾಣ ದರ ಇರುವ ಖಾಸಗಿ ಬಸ್‌ಗಳಿಂದ ಜನರನ್ನು
ಸರ್ಕಾರಿ ಬಸ್‌ ಕಡೆಗೆ ಸೆಳೆಯಲು ಈ ಚಿಂತೆನೆ ಪೂರಕವಾಗಬಹುದು ಎನ್ನಲಾಗಿದೆ.

Advertisement

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಪ್ರತ್ಯೇಕ ವಿದ್ಯುತ್‌ ದರ ನಿಗದಿಪಡಿಸಿದೆ. ದಿನದ 24 ಗಂಟೆ ಗುಣಮಟ್ಟದ ವಿದ್ಯುತ್‌ ನೀಡುವುದರಿಂದ ಹಾಗೂ ಹೆಚ್ಚು ಆದಾಯ ತಂದುಕೊಡುವುದರಿಂದ
ನಗರದಲ್ಲಿ ವಿದ್ಯುತ್‌ ದರ ಹೆಚ್ಚಿದ್ದರೆ, ಹಳ್ಳಿಗಳಲ್ಲಿ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸಲಾಗುತ್ತಿದೆ. ಇದೇ ಮಾದರಿಯನ್ನು ಸಾರಿಗೆ ವ್ಯವಸ್ಥೆಯಲ್ಲೂ ಯಾಕೆ ಅಳವಡಿಸ ಬಾರದೆಂಬ ಪ್ರಶ್ನೆ ಈಗ ಸರ್ಕಾರದ ಮುಂದಿದೆ. ಕೇವಲ ಚಿಲ್ಲರೆ ಸಮಸ್ಯೆ ಹಾಗೂ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಬಿಎಂಟಿಸಿ ಪ್ರಯಾಣ ದರದಲ್ಲಿ ಎರಡು ರೂ. ಕಡಿಮೆ ಮಾಡಿದೆ (ಎರಡನೇ ಹಂತಕ್ಕೆ ಮಾತ್ರ). ಇದು ಫ‌ಲ ಕೂಡ ನೀಡಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ತಕ್ಕಮಟ್ಟಿಗೆ ಏರಿಕೆಯೂ ಆಗಿದೆ ಎಂದು ಸ್ವತಃ ಬಿಎಂಟಿಸಿ
ಅಧಿಕಾರಿಗಳು ಹೇಳುತ್ತಾರೆ. ಹಾಗಾಗಿ, ಗ್ರಾಮೀಣ ಭಾಗಗಳಲ್ಲಿ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಇದೇ ಮಾದರಿಯನ್ನು ಅನುಸರಿಸಬಹುದಾಗಿದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ.

ಸಬ್ಸಿಡಿ ದರ ಸರ್ಕಾರದ ಕರ್ತವ್ಯ: ವಿದ್ಯುತ್‌ ವ್ಯವಸ್ಥೆಯಂತೆಯೇ ಸಾರಿಗೆ ವ್ಯವಸ್ಥೆಯಲ್ಲೂ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಎರಡು ವರ್ಗಗಳಿವೆ. ನಗರಕ್ಕೆ ಹೋಲಿಸಿದರೆ, ಹಳ್ಳಿಗಳಲ್ಲಿ ಸಾರಿಗೆ ಸೇವೆಯ ಗುಣಮಟ್ಟ ಸುಧಾರಿಸಬೇಕಿದೆ. ಹೀಗಿರುವಾಗ, ಒಂದೇ
ಮಾದರಿಯ ದರ ನಿಗದಿ ಎಷ್ಟು ಸರಿ? ಆದ್ದರಿಂದ ಸಬ್ಸಿಡಿ ದರದಲ್ಲಿ ಹಳ್ಳಿಯ ಜನರಿಗೆ ಸಾರಿಗೆ ಸೇವೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಜನರ ಪ್ರಯಾಣವೂ ಸುರಕ್ಷಿತವಾಗಿರುತ್ತದೆ. ಆ ಮೂಲಕ ಅಪಘಾತಗಳನ್ನು ತಗ್ಗಿಸಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆ
(ಐಐಎಸ್ಸಿ) ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಸಾರಿಗೆ ವ್ಯವಸ್ಥೆಗಳ ಇಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕ ಡಾ.ಆಶಿಶ್‌ ವರ್ಮ ಅಭಿಪ್ರಾಯಪಡುತ್ತಾರೆ.

ಸೇವೆ ಬೇರೆ ಬೇರೆ; ಪ್ರಯಾಣಕ್ಕೆ ಒಂದೇ ದರ
ನಗರದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬಸ್‌ ಸೇವೆ ಇದೆ. ಜನರನ್ನು ಸೆಳೆಯಲು ಹೊಸ ಬಸ್‌ಗಳನ್ನು ಇಲ್ಲಿ ಆಗಾಗ್ಗೆ ಪರಿಚಯಿಸಲಾಗುತ್ತದೆ. ಆದರೆ, ಪಟ್ಟಣಗಳಲ್ಲಿ ಓಡಿಸಿಬಿಟ್ಟ “ಡಕೋಟಾ’ ಬಸ್‌ಗಳು ಗ್ರಾಮೀಣ ಭಾಗದಲ್ಲಿ ಕಾರ್ಯಾಚರಣೆಗೊಳ್ಳುತ್ತವೆ. ಅವುಗಳ ಸೇವೆ ಕೂಡ ಅಪರೂಪ. ಕೆಲ ದೂರದ ಗ್ರಾಮಗಳಲ್ಲಂತೂ ಒಂದು,ಎರಡು ಬಸ್‌ಗಳಿವೆ. ಆದರೆ, ಈ ಎರಡೂ ವರ್ಗಗಳ ಪ್ರಯಾಣಿಕರಿಗೆ ಪ್ರಯಾಣ ದರ ಮಾತ್ರ ಒಂದೇ ರೀತಿ ಇದೆ. ಇದರ ಲಾಭವನ್ನು ಖಾಸಗಿ ಬಸ್‌ ಮಾಲೀಕರು ಪಡೆಯುತ್ತಿದ್ದಾರೆ. ರಾಜ್ಯದ ಮೈಸೂರು, ಮಂಗಳೂರು, ಕೋಲಾರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಉಡುಪಿ ಜಿಲ್ಲೆಗಳಲ್ಲಿ ಅರ್ಧ ಶತಮಾನ ಕಳೆದರೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳೇ ಹೆಚ್ಚು ಆಪ್ತವಾಗಿವೆ. ಕಾರಣ ಪ್ರಯಾಣ ದರ ಕೊಂಚ 
ಕಡಿಮೆ ಇರುತ್ತದೆ. ಹೀಗಾಗಿ, ಸಬ್ಸಿಡಿ ಮಾದರಿಯನ್ನು ಅನುಸರಿಸಿದರೆ, ಸರ್ಕಾರಿ ಬಸ್‌ಗಳತ್ತ ಆಕರ್ಷಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಕ್ಕೆ ಅವಕಾಶವಿದೆ ಎಂಬುದು ಸಾರಿಗೆ ಇಲಾಖೆ ಜಂಟಿ ಆಯುಕ್ತರೊಬ್ಬರ ಅಭಿಪ್ರಾಯ. 

ಸಬ್ಸಿಡಿ ದರದಲ್ಲಿ ಸಾರಿಗೆ ಸೇವೆ ಕಲ್ಪಿಸಲು ಸಾಧ್ಯ ಇದೆ. ಆದರೆ, ಇದಕ್ಕೆ ಸರ್ಕಾರದಿಂದ ಸಹಾಯಧನ ಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾದರೆ, ಹೆಚ್ಚು ಜನರನ್ನೂ ಆಕರ್ಷಿಸಬಹುದು. 
● ಎಸ್‌.ಆರ್‌. ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

Advertisement

● ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next