Advertisement

ಪುರಸಭೆಯಿಂದ ವಿದ್ಯುತ್‌ ಕಳವು: ಆರೋಪ

12:40 PM May 26, 2017 | |

ತಿ.ನರಸೀಪುರ: ಹೈ ಮಾಸ್ಕ್ ಬೀದಿ ದೀಪಗಳಿಗೆ ಅನಧಿಕೃತವಾಗಿ ಸಂಪರ್ಕ ಪಡೆಯುವ ಮೂಲಕ ಪುರಸಭೆಯಿಂದ ವಿದ್ಯುತ್‌ ಕಳವು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಪಟ್ಟಣದ ಸೆಸ್ಕ್ನ ಉಪವಿಭಾದ ಕಚೇರಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದಲೇ ಕೇಳಿಬಂದಿತು.

Advertisement

ಪಟ್ಟಣದಲ್ಲಿರುವ ಶ್ರೀ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಉಪ ವಿಭಾಗದ ಕಚೇರಿ ಆವರಣದಲ್ಲಿ ನಡೆದ ಉಪ ವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಹೈ ಮಾಸ್ಕ್ ಬೀದಿ ದೀಪಗಳು ಸೇರಿದಂತೆ ಕೆಲವು ಕಾಮಗಾರಿಗಳಿಗೆ ರಸ್ತೆಗಳಲ್ಲಿ ಹಾದು ಹೋಗಿರುವ ವಿದ್ಯುತ್‌ ಮೇನ್‌ ಲೈನ್‌ನಿಂದಲೇ ಅನಧಿಕೃತ ಸಂಪರ್ಕ ಪಡೆದುಕೊಂಡು ವಿದ್ಯುತ್‌ ಬಳಕೆ ಮಾಡಲಿಕ್ಕೆ ಪುರಸಭೆ ವಿದ್ಯುತ್‌ ಕಳ್ಳತನ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ದಸಂಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಚಂದ್ರಶೇಖರ್‌ ಆರೋಪಿಸಿದರು.

ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕಿರಗಸೂರು ಶಂಕರ್‌ ಮಾತನಾಡಿ, ಕಿರಗಸೂರು ಗ್ರಾಪಂ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ಟೌನ್‌2 ನಿಂದ ವಿದ್ಯುತ್‌ ಸರಬರಾಜು ಆಗುತ್ತಿದ್ದುದ್ದನ್ನು ಸ್ಥಗಿತಗೊಳಿಸಿ, ಡಣಾಯಕಪುರ ಲೈನ್‌ ನೀಡಲಾಗಿದೆ. ಇದರಿಂದಾಗಿ ವಿದ್ಯುತ್‌ ಸರಬರಾಜು ಸಮರ್ಪಕವಾಗಿ ಸಿಗುತ್ತಿಲ್ಲದ್ದ ರಿಂದ ಕೂಡಲೇ ಟೌನ್‌ 2 ಲೈನ್‌ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ವಿದ್ಯುತ್‌ ಬಿಲ್ಲನ್ನು ಪಾವತಿಸದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಹೊಸ ಬೆಳಕು ಯೋಜನೆ ಎಲ್‌ಇಡಿ ಬಲ್ಬ್ಗಳು ಖಾತರಿಯಿದ್ದರೂ ಕೆಟ್ಟು ಹೋಗಿ ಬಾಳಿಕೆಗೆ ಬರುತ್ತಿಲ್ಲವಾದ್ದರಿಂದ ಬದಲಾಯಿಸಿಕೊಡುವ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಆಗ್ರಹಿಸಿದರು. ದಸಂಸ ತಾಲೂಕು ಸಂಚಾಲಕ ಕುಕ್ಕೂರು ರಾಜು ಹಾಗೂ ಡಿವೈಎಫ್ಐ ಅಧ್ಯಕ್ಷ ಸಿ.ಪುಟ್ಟಮಲ್ಲಯ್ಯ ಮಾತನಾಡಿ, ರಸ್ತೆಮಧ್ಯೆ ವಿದ್ಯುತ್‌ ಕಂಬಗಳಿದ್ದರೂ ಅವುಗಳನ್ನು ತೆರವುಗೊಳಿಸದೆ ಸಿಮೆಂಟ್‌ ರಸ್ತೆ ಕಾಮಗಾರಿ ನಡೆಸಲಾಗಿದೆ.

ಪರಿಣಾಮ ನಡು ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಅಪಾಯಕಾರಿಯಾಗಿ ನಿಂತಿವೆ. ಕಾಮಗಾರಿ ನಡೆಸುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಇಬ್ಬರೂ ಸೆಸ್ಕ್ ಮೇಲೆ ಆರೋಪ ಹೊರಿಸುತ್ತಾರೆ ಎಂದು ಆರೋಪಿಸಿದರು. ಅಲ್ಲದೆ ಸಭೆಯಲ್ಲಿದ್ದ ಬಹುತೇಕ ಸಾರ್ವಜನಿಕರು ಮಳೆಯಿಂದ ಮತ್ತು ಮರದ ಕೊಬ್ಬೆಗಳು ಬಿದ್ದು ರಸ್ತೆಗೆ ಬಾಗಿ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬಗಳ ಬದಲಾವಣೆಗೆ ಕಿರಿಯ ಎಂಜಿನಿಯರ್‌ಗಳು ಗಮನ ಹರಿಸುತ್ತಿಲ್ಲ.

Advertisement

ವಿದ್ಯುತ್‌ ಕಂಬಗಳ ಸಾಲು ಇರುವ ಜಾಗಗಳತ್ತ ಓಡಾಡುವುದನ್ನು ಮರೆತು ಬಿಟ್ಟಿದ್ದಾರೆ. ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್‌ ಅವರಿಗೆ ಗ್ರಾಮೀಣ ಪ್ರದೇಶಗಳತ್ತ ಸಂಚರಿಸುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು. ಜನರ ಅಹವಾಲು ಸ್ವೀಕರಿಸಿದ ಸೆಸ್ಕ್ನ ಅಧೀಕ್ಷಕ ಎಂಜಿನಿಯರ್‌ ಎನ್‌.ನರಸಿಂಹೇಗೌಡ ಮಾತನಾಡಿದರು. 

ಸಾಮೂಹಿಕ ಸಮಸ್ಯೆಗಳಿಗಿಂತ ವಿದ್ಯುತ್‌ ಬಳಕೆ ಮಾಡುವ ಗ್ರಾಹಕರು ನೇರವಾಗಿ ದೂರು ನೀಡುವಂತಾಗಬೇಕು. ಪುರಸಭೆ ವಿದ್ಯುತ್‌ ಕಳ್ಳತನವನ್ನು ಪರಿಶೀಲಿಸಿ, ಕೆಟ್ಟಿರುವ ಎಲ್‌ಇಡಿ ಬಲ್ಬ್ಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಕೇಳಿಬಂದ ದೂರುಗಳನ್ನು ನಿಗದಿತ ಅವಧಿಯಲ್ಲಿ ಪರಿಹರಿಸಲಾಗುವುದು. ಮೂರು ತಿಂಗಳಿಗೊಮ್ಮೆ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯನಿರ್ವಹಕ ಎಂಜಿನಿಯರ್‌ ಎ.ಎ.ಸುನೀಲ್‌ಕುಮಾರ್‌, ಸಹಾಯಕ ಎಂಜಿನಿಯರ್‌ಗಳಾದ ದೊರೆಸ್ವಾಮಿ, ಸೋಮ, ಸೈಯದ್‌ ಕೌಸರ್‌ ಬೇಗಂ, ಕಿರಿಯ ಎಂಜಿನಿಯರ್‌ ಗೀತಾ, ಸಿದ್ದಮಹದೇವ, ನಾಗರಾಜು, ಹಿರಿಯ ಸಹಾಯಕ ಹೆಚ್‌.ಎನ್‌.ಶ್ಯಾಮು, ಕಿರಿಯ ಸಹಾಯಕ ಸಿ.ರವಿಕುಮಾರ್‌, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದೇಶ್‌, ಕರಾದಸಂಸ ತಾಲೂಕು ಸಂಚಾಲಕ ಬನ್ನಹಳ್ಳಿ ಸೋಮಣ್ಣ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next