ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ನಡುವೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಶ್ರೀಸಾಮಾನ್ಯರ ಕೈ ಸುಡುತ್ತಿದೆ. ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು, ಇದು ಮಧ್ಯಮ ವರ್ಗದ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಇದರ ನಡುವೆಯೇ ರಾಜ್ಯದ ಐದು ಎಸ್ಕಾಂಗಳು ವಿದ್ಯುತ್ ಬೆಲೆ ಪರಿಷ್ಕರಣೆಗೆ ಮುಂದಾಗಿರುವುದು ರಾಜ್ಯದ ಜನರನ್ನು ಕಂಗೆಡಿಸಿದೆ.
ವಿಭಾಗವಾರು ಮಟ್ಟದಲ್ಲಿ ಐದೂ ಎಸ್ಕಾಂಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿವೆ. ಕೊರೊನಾ ಕಾರಣದಿಂದಾಗಿ ಎಪ್ರಿಲ್‌ನಲ್ಲಿ ವಿದ್ಯುತ್ ಬೆಲೆ ಹೆಚ್ಚಳಕ್ಕೆ ಚಿಂತನೆ ಮಾಡಿದ್ದ ಎಸ್ಕಾಂಗಳು, ನವೆಂಬರ್‌ನಲ್ಲಿ ಹೆಚ್ಚಳ ಮಾಡಿದ್ದವು. ಆಗಲೇ ಜನ ಆಕ್ರೋಶಗೊಂಡಿದ್ದರು. ಕೊರೊನಾದಿಂದಾಗಿ ದಿನನಿತ್ಯದ ಜೀವನ ನಡೆಸುವುದೇ ಕಷ್ಟವಾಗಿರುವಾಗ ವಿದ್ಯುತ್ ಬೆಲೆ ಏರಿಕೆ ಮಾಡಿ ಮತ್ತೆ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವುದು ಬೇಡ ಎಂಬುದು ಆಗ್ರಹವಾಗಿತ್ತು. ಆದರೂ ಹೆಚ್ಚಳ ಮಾಡಿದ್ದ ಕಾರಣದಿಂದಾಗಿ ಅಸಮಾಧಾನದಿಂದಲೇ ಜನ ಒಪ್ಪಿಕೊಂಡಿದ್ದರು. ಡಿಸೆಂಬರ್ನಲ್ಲೂ ತೈಲ ಬೆಲೆ ಹೊಂದಾಣಿಕೆಗಾಗಿ ಮತ್ತೆ ಪೈಸೆಗಳ ಲೆಕ್ಕಾಚಾರದಲ್ಲಿ ಬೆಲೆ ಹೆಚ್ಚಳವಾಗಿತ್ತು. ವಿಚಿತ್ರವೆಂದರೆ ಇದು ಜನರ ಗಮನಕ್ಕೆ ಬಾರದೇ ಹೋಗಿತ್ತು.
ಮತ್ತೆ ಈಗ ವಿದ್ಯುತ್ ಬೆಲೆ ಹೆಚ್ಚಳದ ಬಗ್ಗೆ ಎಸ್ಕಾಂ ಮಟ್ಟದಲ್ಲಿ ಮಾತುಕತೆಗಳಾಗಿವೆ. ಜನರ ಅಭಿಪ್ರಾಯ ಸಂಗ್ರಹದ ವೇಳೆ ಮತ್ತೆ ವಿದ್ಯುತ್ ಬೆಲೆ ಏರಿಕೆಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ಆದರೂ ಎಪ್ರಿಲ್ 1ರಿಂದ ಜಾರಿಯಾಗುವಂತೆ ವಿದ್ಯುತ್ ಬೆಲೆ ಹೆಚ್ಚಳ ಮಾಡುವ ಬಗ್ಗೆ ಎಸ್ಕಾಂಗಳು ಪರಿಶೀಲನೆಯಲ್ಲಿವೆ.
ತೈಲೋತ್ಪನ್ನ ವಸ್ತುಗಳ ಜತೆಗೆ ವಿದ್ಯುತ್ ದರವನ್ನೂ ಹೆಚ್ಚಿಸಿದರೆ ನಾವು ಬದುಕುವುದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ. ಒಂದು ಕಡೆ, ಸಾರ್ವಜನಿಕರ ವೆಚ್ಚ ಹೆಚ್ಚಾಗಬೇಕು. ಈ ಮೂಲಕ ಆರ್ಥಿಕತೆ ಬೆಳೆಯಬೇಕು ಎಂಬ ಕಾರಣಕ್ಕಾಗಿ ಬಜೆಟ್ನಲ್ಲಿ ಪಬ್ಲಿಕ್ ಸ್ಪೆಂಡಿಂಗ್ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆದರೆ ಇತ್ತ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಾಗಿದ್ದು, ಜನ ವೆಚ್ಚ ಮಾಡಲಾರದಂಥ ಪರಿಸ್ಥಿತಿಗೆ ಬರುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಮಾಡಿದರೆ, ಇದಕ್ಕೆ ಪೂರಕವಾಗಿರುವ ವಸ್ತುಗಳ ಬೆಲೆಯೂ ಹೆಚ್ಚಾಗಿಯೇ ಆಗುತ್ತದೆ. ಅಂದರೆ ಕೈಗಾರಿಕೆಗಳಲ್ಲಿನ ವೆಚ್ಚ ಹೆಚ್ಚುವುದರಿಂದ ಇಲ್ಲಿ ಉತ್ಪಾದನೆಯಾಗುವ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ಇದರಿಂದ ಜನರ ಮೇಲೆ ಮತ್ತಷ್ಟು ಹೊರೆ ಬೀಳುವುದು ಖಚಿತವಾಗುತ್ತದೆ. ಹೀಗಾಗಿ ಬೆಲೆ ಹೆಚ್ಚಳಕ್ಕೆ ನಿಯಂತ್ರಣವಿಲ್ಲವೇ ಎಂಬುದು ಜನರ ಪ್ರಶ್ನೆಯಾಗಿದೆ.
ಅಷ್ಟೇ ಅಲ್ಲ ಕೊರೊನಾದಿಂದಾಗಿ ಸರಕಾರಕ್ಕೂ ಆರ್ಥಿಕ ಕೊರತೆಯುಂಟಾಗಿದೆ. ಹೀಗಾಗಿ ಬೆಲೆ ಕಡಿತ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿಯಾಗಿದೆ ಎಂಬಂಥ ಮಾತುಗಳೂ ಕೇಳಿಬರುತ್ತಿವೆ. ಆದರೆ ಸರಕಾರದ ಬೊಕ್ಕಸ ತುಂಬಲಿಕ್ಕೆ ಜನರ ಮೇಲೆ ಹೊರೆ ಹಾಕಿದರೆ, ಅವರ ಜೀವನ ಕಷ್ಟವಾಗುವುದಿಲ್ಲವೇ? ಕೊರೊನಾ ವೇಳೆಯಲ್ಲಿ ಸರಕಾರಕ್ಕೆ ಹಣಕಾಸಿನ ಕೊರತೆಯಾದಂತೆ, ಜನ ಸಾಮಾನ್ಯರಿಗೂ ಆಗಿಲ್ಲವೇ ಎಂಬ ಮಾತುಗಳು ಗ್ರಾಹಕರ ಕಡೆಯಿಂದ ಕೇಳಿಬರುತ್ತಿವೆ. ಹೀಗಾಗಿ ಕಷ್ಟ ಎಂಬುದು ಸರಕಾರಕ್ಕೆ ಆದಂತೆ ಜನರಿಗೂ ಆಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಸರಕಾರಗಳು ಜನರ ಮೇಲೆ ಹೊರೆ ಏರಬಾರದು ಎಂಬ ಆಗ್ರಹ ಜನಸಾಮಾನ್ಯರದ್ದು.