Advertisement

ಯೂನಿಟ್‌ಗೆ 62 ಪೈಸೆ ಏರಿಕೆ ಪ್ರಸ್ತಾವ; ತೀವ್ರ ವಿರೋಧ

10:20 AM Feb 15, 2020 | sudhir |

ಮಂಗಳೂರು: ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) 346.09 ಕೋ.ರೂ. ಆದಾಯ ಕೊರತೆ ಎದುರಿಸುತ್ತಿದ್ದು, ಅದನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ 62 ಪೈಸೆಯಷ್ಟು ದರ ಏರಿಸುವಂತೆ ಕೋರಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರೈತರು, ಕೈಗಾರಿಕಾ ಕ್ಷೇತ್ರದ ಪ್ರಮುಖರು ಹಾಗೂ ಸಾರ್ವಜನಿಕರು ಇದನ್ನು ವಿರೋಧಿಸಿದ್ದು, ದರ ಏರಿಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಆಯೋಗವು ಸೂಕ್ತ ತೀರ್ಮಾನ ಕೈಗೊಂಡು ನಿರ್ಧಾರ ಪ್ರಕಟಿಸಲಿದೆ ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್‌ ಮೀನಾ ತಿಳಿಸಿದ್ದಾರೆ.

ವಿದ್ಯುತ್‌ ದರ ಪರಿಷ್ಕರಣೆ ಕುರಿತು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದಿಂದ ವಿಚಾರಣಾ ಸಭೆ ನಡೆಯಿತು. ಶಂಭು ದಯಾಳ್‌ ಮೀನಾ ಅಧ್ಯಕ್ಷತೆ ವಹಿಸಿದ್ದು, ಸದಸ್ಯರಾದ ಎಚ್‌.ಎನ್‌. ಮಂಜುನಾಥ್‌ ಮತ್ತು ಎಂ.ಡಿ. ರವಿ ಉಪಸ್ಥಿತರಿದ್ದರು.

ದರ ಏರಿಸಲು ಅನುಮತಿಸುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಲ್‌ ಆರ್‌. ಪ್ರಸ್ತಾವನೆ ಮಂಡಿಸಿದರು. ವಿದ್ಯುತ್‌ ಖರೀದಿ ವೆಚ್ಚದಲ್ಲಿನ ಏರಿಕೆ ಹಾಗೂ ಹಣದುಬ್ಬರದ ಕಾರಣ ನಿರ್ವಹಣಾ ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ವಿದ್ಯುತ್‌ ದರ ಏರಿಕೆಗೆ ಅವಕಾಶ ನೀಡುವಂತೆ ಕೋರಿದರು.

ಕೃಷಿ ಪಂಪ್‌ಸೆಟ್‌ ಹೆಸರಲ್ಲಿ ಸೋರಿಕೆ
ಉಡುಪಿಯ ಸತ್ಯನಾರಾಯಣ ಉಡುಪ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳ ಹೆಸರಿನಲ್ಲಿ ವಿದ್ಯುತ್‌ ಸೋರಿಕೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಐಪಿ ಪಂಪ್‌ಸೆಟ್‌ಗಳ ಮೀಟರೀಕರಣ ನಡೆಯಬೇಕು. ರೈತರು ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತೇವೆ. ಲೈನ್‌ಮನ್‌ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಸಮಸ್ಯೆಯಾಗುತ್ತಿದೆ. ಬಂಡವಾಳ ಹೂಡಿ ಅದರಿಂದ ಪ್ರತಿಫಲವೇ ಇಲ್ಲದಿದ್ದರೆ ಅಂತಹ ಬಂಡವಾಳ ಹಾಕುವ ಯೋಜನೆಯ ಮೂಲಕ ಗ್ರಾಹಕರಿಗೆ ಹೊರೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

ಕೆಲವು ವಿದ್ಯುತ್‌ ಗುತ್ತಿಗೆದಾರರಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಮೆಸ್ಕಾಂ ಆಡಳಿತ ವ್ಯವಸ್ಥೆಯನ್ನು ನೇರವಾಗಿ ಜನರ ಬಳಿಗೆ ಮುಟ್ಟಿಸಬೇಕು ಎಂದರು.

ಐಸ್‌ಪ್ಲಾಂಟ್‌ ವಿವರ ನೀಡಿ
ಕರಾವಳಿ ಐಸ್‌ಪ್ಲಾಂಟ್‌ ಮಾಲಕರ ಸಂಘದ ರಾಜೇಂದ್ರ ಸುವರ್ಣ ಮಾತನಾಡಿ, ಮೀನುಗಾರಿಕೆಯನ್ನೇ ನಂಬಿರುವ ಐಸ್‌ ಪ್ಲಾಂಟ್‌ಗಳು ಮೀನುಗಾರಿಕೆ ಕಡಿಮೆ ಆಗಿ ನಷ್ಟದಲ್ಲಿವೆ. ವಿದ್ಯುತ್‌ ದರ ಹೆಚ್ಚಳವಾದರೆ ಮತ್ತಷ್ಟು ಹೊಡೆತ ನೀಡಿದಂತಾಗುತ್ತದೆ. ಐಸ್‌ಪ್ಲಾಂಟ್‌ಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಬೇಕು ಎಂದರು. ಈ ಭಾಗದಲ್ಲಿ ಎಷ್ಟು ಐಸ್‌ಪ್ಲಾಂಟ್‌ಗಳಿವೆ ಎಂಬ ಬಗ್ಗೆ ವಿವರ ಒದಗಿಸುವಂತೆ ಕಳೆದ ವರ್ಷ ಹೇಳಿದ್ದರೂ ಅದನ್ನು ಯಾಕೆ ನೀಡಿಲ್ಲ ಎಂದು ಅಧ್ಯಕ್ಷ ಶಂಭು ದಯಾಳ್‌ ಮೀನಾ ಪ್ರಶ್ನಿಸಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರಮುಖರು ಮಾತನಾಡಿ, ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್‌ ನೀಡುವಂತೆ ಕೋರಿದರು. ಭಾರತೀಯ ಕಿಸಾನ್‌ ಸಭಾದ ಪರಮೇಶ್ವರಪ್ಪ ಮಾತನಾಡಿ, ಲೈನ್‌ಮನ್‌ ಮೂಲಕ ಬಿಲ್‌ ಕಲೆಕ್ಟ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ಹಗಲು ಹೊತ್ತಲ್ಲೇ 3 ಫೇಸ್‌ ವಿದ್ಯುತ್‌ ರೈತರಿಗೆ ನೀಡಿ ಎಂದರು. ಎಂಎಸ್‌ಇಝಡ್‌ ಪರವಾಗಿ ಸೂರ್ಯನಾರಾಯಣ ಅಹವಾಲು ಸಲ್ಲಿಸಿದರು.
ಪ್ರಮುಖರಾದ ಹನೀಫ್‌, ಈಶ್ವರ್‌ ರಾಜ್‌, ಸೋಹನ್‌ಬಾಬು, ಬಂಟ್ವಾಳದ ಲಕ್ಷ್ಮೀನಾರಾಯಣ ಅಹವಾಲು ಮಂಡಿಸಿದರು.

ಏರಿಕೆಯಲ್ಲ ; 92 ಪೈಸೆ ಇಳಿಕೆ ಸಾಧ್ಯ!
ಸಾಗರದ ವೆಂಕಟಗಿರಿ ಮಾತನಾಡಿ, ಸಾರ್ವಜನಿಕ ಉದ್ದೇಶದ ಕಾಯ್ದೆಯಡಿ ನೋಂದಣಿ ಪಡೆದ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಕಡಿಮೆ ದರದ ವಿದ್ಯುತ್‌ ಪಡೆದು ದುರುಪಯೋಗ ಮಾಡುತ್ತಿವೆ. ಇದಕ್ಕೆ ಸೂಕ್ತ ನಿಯಮಾವಳಿ ರೂಪಿಸಬೇಕಿದೆ. ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ನೀಗಿಸಬೇಕು. ಗ್ರಾಹಕ ಸೇವಾ ಕೇಂದ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿ. ಸೋಲಾರ್‌ ವಿದ್ಯುತ್‌ ಪ್ರಮಾಣ ಹೆಚ್ಚುಮಾಡಲು ಖರೀದಿ ದರ ಏರಿಸಬೇಕು ಹಾಗೂ ಮೆಸ್ಕಾಂಗೆ ಸರಕಾರ ಹಾಗೂ ಬೇರೆ ಬೇರೆ ಮೂಲಗಳಿಂದ ಬರಲು ಬಾಕಿ ಇರುವ 1,700 ಕೋ.ರೂ. ವಸೂಲಿ ಮಾಡಬೇಕು. ಇವೆಲ್ಲವೂ ಸಾಧ್ಯವಾದಾಗ ಮೆಸ್ಕಾಂಗೆ ಈಗ ವಿಧಿಸುತ್ತಿರುವ ದರಕ್ಕಿಂತಲೂ 92 ಪೈಸೆಯಷ್ಟು ಕಡಿಮೆ ಮಾಡುವ ಸಾಮರ್ಥ್ಯ ಬರುತ್ತದೆ ಎಂದರು.

ವಾರದಲ್ಲಿ 2 ದಿನ ತನಿಖೆ
ಆಯೋಗದ ಅಧ್ಯಕ್ಷ ಶಂಭು ದಯಾಳ್‌ ಮೀನಾ ಮಾತನಾಡಿ, ಟ್ರಾನ್ಸ್‌ ಫಾರ್ಮರ್‌ ಸಮಸ್ಯೆ ಹಾಗೂ ಗ್ರಾಹಕರ ಆದ್ಯತಾ ವಿಷಯ ಗಳು ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಪ್ರತೀ ವಾರದ ಎರಡು ದಿನ ಉನ್ನತ ಅಧಿಕಾರಿಗಳು ಗ್ರಾಮಾಂತರ ಸಹಿತ ಎಲ್ಲೆಡೆ ತನಿಖೆ ನಡೆಸಬೇಕು. ಇದು ಸಾಧ್ಯವಾದರೆ ವಿದ್ಯುತ್‌ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ಮಾತನಾಡಿ, ವಾರದಲ್ಲಿ ಎರಡು ದಿನ ತನಿಖೆಗೆ ಸೂಚಿಸಲಾ ಗುವುದು. ಕೃಷಿಕರ ಐಪಿ ಪಂಪ್‌ಸೆಟ್‌ಗಳಿಗೆ ಮೀಟರಿಂಗ್‌ ಸಂಬಂಧವೂ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾ ಗುವುದು. ಗ್ರಾಹಕರ ಜತೆಗೆ ಉತ್ತಮವಾಗಿ ವ್ಯವಹರಿಸಲು ಸಿಬಂದಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next