Advertisement

ಗ್ರಾಹಕರ ಕೈ ಸೇರದ ಪರಿಷ್ಕೃತ ಬಿಲ್‌; ಪೂರ್ವಾನ್ವಯದಿಂದಲೂ ಹೊರೆ

09:52 AM Jun 07, 2019 | keerthan |

ಮಂಗಳೂರು: ಮೆಸ್ಕಾಂ ಸಹಿತ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಪರಿಷ್ಕೃತ ವಿದ್ಯುತ್‌ ದರ ಜಾರಿಗೆ ಬಂದರೂ ಹೊಸ ಬಿಲ್‌ ಸಿದ್ಧವಾಗದೆ ಬಹುತೇಕ ಕಡೆ ಈ ತಿಂಗಳು ಗ್ರಾಹಕರ ಕೈಸೇರುವುದು ಅನುಮಾನ. ಬಾಕಿ ಬಿಲ್‌ ಮೊತ್ತ ಒಟ್ಟು ಸೇರಿ ಕಿಸೆಗೆ ಶಾಕ್‌ ನೀಡಬಹುದೇ ಎಂಬ ಆತಂಕ ಗ್ರಾಹಕರದು.

Advertisement

ಹೊಸ ದರವು ಈ ಎ.1ರಿಂದ ಪೂರ್ವಾನ್ವಯ ವಾಗಿದ್ದು, ಗ್ರಾಹಕರ ಹಾಲಿ ವಿದ್ಯುತ್‌ ಬಿಲ್‌ನಲ್ಲಿ ಹೆಚ್ಚುವರಿ ಮೊತ್ತವನ್ನು ಸೇರಿಸಲಾಗು ತ್ತದೆ. ಆದರೆ ಪರಿಷ್ಕೃತ ಬಿಲ್‌ ನೀಡಲು ಸಾಫ್ಟ್‌ವೇರ್‌ ಅಪ್‌ಡೇಟ್‌ ಸಹಿತ ತಾಂತ್ರಿಕ ಸಿದ್ಧತೆಗಳು ಪೂರ್ಣಗೊಂಡಿಲ್ಲ. ಹಾಗಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಮೇ ತಿಂಗಳ ಬಿಲ್‌ ರವಾನೆಯೂ ಸುಮಾರು 15ರಿಂದ 20 ದಿನ ವಿಳಂಬವಾಗುವ ಸಾಧ್ಯತೆಯಿದೆ. ಕೆಲವು ಕಡೆ ಮಾತ್ರ ಈ ಹಿಂದಿನ ದರದನ್ವಯ ವಿದ್ಯುತ್‌ ಬಿಲ್‌ ರವಾನಿಸಲಾಗಿದೆ.

ಎಲ್ಲೆಲ್ಲಿ ಗ್ರಾಹಕರಿಗೆ ಇನ್ನೂ ಹಾಲಿ ತಿಂಗಳ ವಿದ್ಯುತ್‌ ಬಿಲ್‌ ಬಂದಿಲ್ಲವೋ ಅಲ್ಲೆಲ್ಲ ಪರಿಷ್ಕೃತ ದರದನ್ವಯ ಒಂದೆರಡು ವಾರದೊಳಗೆ ಅಥವಾ ಮುಂದಿನ ತಿಂಗಳ ಬಿಲ್‌ನಲ್ಲಿ ಬಾಕಿ ಅಥವಾ ವ್ಯತ್ಯಸ್ತ ಮೊತ್ತ ಸೇರ್ಪಡೆಗೊಂಡು ರವಾನೆಯಾಗುವ ಸಾಧ್ಯತೆಯಿದೆ. ಇನ್ನು ಪರಿಷ್ಕೃತ ದರ ಎ.1ರಿಂದ ಪೂರ್ವಾನ್ವಯವಾಗುವುದರಿಂದ ಎಪ್ರಿಲ್‌- ಮೇ ತಿಂಗಳ ವ್ಯತ್ಯಸ್ತ ದರ ಅನ್ವಯಿಸಲಾದ ಬಿಲ್‌ ಮತ್ತು ಮೇ- ಜೂನ್‌ ಬಿಲ್‌ಗ‌ಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ಮೆಸ್ಕಾಂ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಮಂಗಳೂರು ನಗರ ವ್ಯಾಪ್ತಿಯ ಬಿಲ್ಲಿಂಗ್‌ ಸಾಫ್ಟ್‌ವೇರ್‌ ಅಪ್‌ಡೇಟ್‌ ಬಹುತೇಕ ಪೂರ್ಣಗೊಂಡಿದೆ. ಗ್ರಾಮಾಂತರ ದಲ್ಲಿ ಪರಿವರ್ತನೆ ನಡೆಯುತ್ತಿದೆ. ಹೊಸ ದರದನ್ವಯ ಮೇ- ಜೂನ್‌ ತಿಂಗಳ ಬಿಲ್‌ನ್ನು ಈಗ ನೀಡಲಾಗುತ್ತದೆ. ಎಪ್ರಿಲ್‌- ಮೇ ತಿಂಗಳ ವ್ಯತ್ಯಸ್ತ ದರದ ಬಿಲ್‌ ತಯಾರಿಸಲು ಸ್ವಲ್ಪ ಸಮಯ ಬೇಕಾಗಿದ್ದು, ಜೂನ್‌ ಅಂತ್ಯಕ್ಕೆ ವಿತರಿಸಲು ಸಾಧ್ಯವಾಗಬಹುದು ಎಂದು ಮೆಸ್ಕಾಂ ಮೂಲಗಳು ವಿವರಿಸಿವೆ.

ದರ ಏರಿಕೆ ಎಷ್ಟು, ಹೇಗೆ?
ಪರಿಷ್ಕೃತ ದರದ ಬಗ್ಗೆ ಗ್ರಾಹಕರಿಗೆ ಗೊಂದಲವಿದೆ. ಯೂನಿಟ್‌ಗೆ ಸರಾಸರಿ 33 ಪೈಸೆ ಹೆಚ್ಚಳ ಎಂದು ತಿಳಿಸಿದ್ದರೂ ದೊಡ್ಡ ಮೊತ್ತದ ಬಿಲ್‌ ಬರಬಹುದೇ ಎಂಬ ಆತಂಕವಿದೆ. ಪರಿಷ್ಕೃತ ಬಿಲ್‌ ಹೀಗಿರುತ್ತದೆ:  ಈ ಹಿಂದೆ 300 ಯೂನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿದ್ದ ಮನೆಗೆ 2,192 ರೂ. ಬಿಲ್‌ ಬರುತ್ತಿದ್ದು, ಪರಿಷ್ಕೃತ ದರದಂತೆ 2,304 ರೂ. ಆಗುತ್ತದೆ. ಅಂದರೆ ಹಿಂದಿಗಿಂತ 112 ರೂ. ಹೆಚ್ಚಳ. ಹಾಗೆಯೇ 1,500 ಯೂನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿದ್ದ 10 ಎಚ್‌ಪಿ ಸಾಮರ್ಥ್ಯದ ಕೈಗಾರಿಕಾ ಘಟಕಕ್ಕೆ ಈ ಹಿಂದೆ 10,365 ರೂ. ಬಿಲ್‌ ಬರುತ್ತಿದ್ದರೆ ಹೊಸ ದರದ ಪ್ರಕಾರ 10,764 ರೂ. ಆಗಲಿದೆ. ಅಂದರೆ 399 ರೂ. ಹೆಚ್ಚಳ.  ಗ್ರಾಹಕರಿಗೆ ಹೊರೆ!

Advertisement

ಜೂನ್‌ನಲ್ಲಿಯೇ ಬಿಲ್‌ ಬಾರದಿದ್ದರೆ ಗ್ರಾಹಕರಿಗೆ ಹೊರೆ ಯಾಗುವ ಸಾಧ್ಯತೆ ಇದೆ. ಎಪ್ರಿಲ್‌, ಮೇ ತಿಂಗಳ ಹೆಚ್ಚುವರಿ ದರ ಮತ್ತು ಮೇ ತಿಂಗಳದ್ದು ಸೇರಿದರೆ ಬಿಲ್‌ ಮೊತ್ತ ದೊಡ್ಡದಾಗುತ್ತದೆ. ಜೂನ್‌ನಲ್ಲೂ ನೀಡದಿದ್ದರೆ ಜುಲೈ ಬಿಲ್‌ ಬೃಹತ್ತಾಗುತ್ತದೆ. ಸಾಮಾನ್ಯರಿಗೆ ಇದು ಹೊರೆಯೇ.

ಲೋ ಟೆನ್ಶನ್‌ ಕೈಗಾರಿಕಾ ಸಂಪರ್ಕಗಳಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಂದರೆ, ಯೂನಿಟ್‌ಗೆ 15 ಪೈಸೆ ಹೆಚ್ಚಳವಾಗಿದೆ. ಉಳಿದ ಎಲ್ಲ ವಿಭಾಗಗಳಲ್ಲಿ ಯೂನಿಟ್‌ಗೆ 20ರಿಂದ 25 ಪೈಸೆ ಏರಿಕೆಯಾಗಿದೆ. ಲೋ ಟೆನ್ಶನ್‌ ಮತ್ತು ಹೈಟೆನ್ಶನ್‌ನ ಎಲ್ಲ ವಿಭಾಗಗಳಲ್ಲಿ ಒಂದು ಕೆವಿಎ/ ಎಚ್‌ಪಿ/ ಕೆಡಬು ಎ ವಿದ್ಯುತ್‌ಗೆ 10 ರೂ.ನಂತೆ ಸರಾಸರಿ 33 ಪೈಸೆ ಹೆಚ್ಚಳವನ್ನು ನಿಗದಿ ಪಡಿಸಲಾಗಿದೆ. ಈ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ಹೊರೆ ಆಗಲಾರದು ಎಂದು ಭಾವಿಸುತ್ತೇವೆ.
– ಸ್ನೇಹಲ್‌ ಆರ್‌., ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next