ಕುಷ್ಟಗಿ : ತಾಲೂಕಿನ ಸಂಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿದ್ಯುತ್ ತಂತಿ ಇದ್ದರೂ ಜೆಸ್ಕಾಂ ಮಾತ್ರ ತೆರವುಗೊಳಿಸಲು ಮೀನ ಮೇಷ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಗನಾಳ ಶಾಲೆಯ ಆವರಣ ಗೋಡೆಯ ದ್ವಾರ ಬಾಗಿಲಿಗೆ ಅಂಟಿಕೊಂಡೇ ವಿದ್ಯುತ್ ಕಂಬ ಇದ್ದು ವಿದ್ಯುತ್ ತಂತಿ ಜೋತು ಬಿದ್ದಿರುವುದು ಕಾಣಬಹುದಾಗಿದೆ. ಶಾಲೆಯ ಪ್ರವೇಶ ದ್ವಾರದಲ್ಲಿಯೇ ಅಪಾಯಕಾರಿ ಸ್ಥಿತಿಗೆ ಪಾಲಕರು, ಗ್ರಾಮಸ್ಥರು ತಾವರಗೇರಾ ಶಾಖಾಧಿಕಾರಿಯವರ ಗಮನಕ್ಕೆ ತಂದರೂ ಸಹ ವಿದ್ಯುತ್ ಕಂಬ ಸ್ಥಳಾಂತರಗೊಂಡಿಲ್ಲ.
ಈ ವಿದ್ಯುತ್ ಕಂಬದಿಂದಾಗಿ ಆವರಣ ಗೋಡೆಯ ಕಾಮಗಾರಿ ಹಾಗೂ ದ್ವಾರ ಬಾಗಿಲಿನ ಕಮಾನು ನಿರ್ಮಿಸಲು ಸಾಧ್ಯವಾಗಿಲ್ಲ. ಮಕ್ಕಳು ಇದರ ಅಡಿಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದು, ಕಿಡಗೇಡಿ ಮಕ್ಕಳು ಏನಾದರೂ ಅವಾಂತರ ಸೃಷ್ಟಿಸುವ ಆತಂಕ ಪಾಲಕರದ್ದು ಆಗಿದೆ.
ಇದನ್ನೂ ಓದಿ : ರಾಜ್ಯದ ಜನ ಕಾಂಗ್ರೆಸ್ ನ್ನು ಸಂಪೂರ್ಣವಾಗಿ ತಿರಸ್ಕರಿಸುವ ದಿನ ದೂರವಿಲ್ಲ: ಆರ್.ಅಶೋಕ್
ಈ ಕುರಿತು ಜೆಸ್ಕಾಂ ಎಇಇ ಮಂಜುನಾಥ ಪ್ರತಿಕ್ರಿಯಿಸಿ ಬುಧವಾರ ಶಾಲೆಗೆ ಶಾಖಾಧಿಕಾರಿಯನ್ನು ವಾಸ್ತವ ಸ್ಥಿತಿ ಪರಿಶೀಲಿಸಲು ಸೂಚಿಸಿ ವಿದ್ಯುತ್ ಕಂಬ ತೆರವಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.