ಬೀಜಿಂಗ್: ತಂತ್ರಜ್ಞಾನವನ್ನೇ ಹಾಸು ಹೊದ್ದಿರುವ ಚೀನದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಹೀಗಾಗಿ, ಜನರು ಜನರೇಟರ್, ಟಾರ್ಚ್, ಮೊಂಬತ್ತಿ ಬಳಸಿ ದಿನವಹಿ ಕೆಲಸಗಳನ್ನು ನಿರ್ವಹಿಸುವಂತಾಗಿದೆ. ವಿದ್ಯುತ್ ವ್ಯತ್ಯಯದಿಂದ ಮನೆಗಳೂ ಸ್ತಬ್ಧವಾಗಿವೆ.
ಬಟ್ಟೆ ತೊಳೆಯುವುದು, ಪಾತ್ರೆ ಸ್ವಚ್ಛಗೊಳಿಸುವಿಕೆ ಕೆಲಸಗಳು ನನೆಗುದಿಗೆ ಬಿದ್ದಿವೆ. ವಿದ್ಯುತ್ ಇಲ್ಲದೆ ಅಡುಗೆ ಇಲ್ಲ ಎಂಬಂತಾಗಿದ್ದು ಹಲವಾರು ಜನರು ರೆಸ್ಟೋರೆಂಟ್‌ಗಳಿಗೆ ಮುಗಿಬಿದ್ದಿದ್ದಾರೆ. ಜನರೇಟರ್ ಆಧಾರಿತ ವಿದ್ಯುತ್ ಸೌಕರ್ಯ ಉಳ್ಳ ರೆಸ್ಟೋರೆಂಟ್‌ಗಳು ಮಾತ್ರ ಉಪಾಹಾರ ಸೇವೆ ನೀಡುತ್ತಿವೆ.
ಸರಕಾರದ ನಿರ್ಧಾರವೇ ಕಾರಣ!: ನಿಗದಿತ ಮಟ್ಟದಲ್ಲಿ ವಿದ್ಯುತ್ ಉಳಿಸಬೇಕೆಂಬ ಹುಚ್ಚು ನಿರ್ಧಾರವೊಂದನ್ನು ಚೀನ ಸರಕಾರ ಕೈಗೊಂಡಿರುವುದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿಗಳ ಸ್ವರ್ಗವಾಗಿ ಪರಿವರ್ತನೆಯಾಗಿರುವ ಚೀನದಲ್ಲೀಗ ವಿದ್ಯುತ್ ಬೇಡಿಕೆ, ಒಟ್ಟಾರೆ ದೇಶೀಯ ವಿದ್ಯುತ್ ಉತ್ಪಾದನೆಯ ಎರಡರಷ್ಟಕ್ಕೆ ಏರಿದೆ. ದೇಶದ 20 ಪ್ರಾಂತ್ಯಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಬೇಕು ಎಂದು ಚೀನ ಸಂಪುಟದ ಯೋಜನಾ ಸಮಿತಿ ವರದಿ ಸಲ್ಲಿಸಿತ್ತು.
ಇದನ್ನೂ ಓದಿ:12 ಉಗ್ರ ಸಂಘಟನೆಗಳಿಗೆ ಪಾಕ್ ಆಶ್ರಯ
ವಾರ ಕಾಲ ಬಂದ್: ನಾಗರಿಕರಿಗಷ್ಟೇ ಅಲ್ಲ, ಕೆಲವು ಕೈಗಾರಿಕಾ ಪ್ರಾಂತ್ಯಗಳಲ್ಲಿ ಸೂಚನೆ ಹೊರಡಿಸಿರುವ ಸರ ಕಾರ, ಎಲ್ಲ ಕೈಗಾರಿಕೆಗಳನ್ನು ಒಂದು ವಾರ ಮುಚ್ಚುವಂತೆ ಹೇಳಿದೆ. ಈಶಾನ್ಯ ಚೀನದ ಕೈಗಾರಿಕ ನಗರವಾದ ಶೆನ್ಯಾಂಗ್‌ನಲ್ಲಿ ಬೆಳಗ್ಗೆ 7:30ರಿಂದಲೇ ವಿದ್ಯುತ್ ಕಡಿತವಾಗುತ್ತದೆ. ಹಾಗಾಗಿ, ಅಲ್ಲಿನ ಕಾರ್ಖಾನೆಗಳು ಬೆಳಗ್ಗೆ 6ಕ್ಕೆ ಕೆಲಸ ಶುರು ಮಾಡಿ, ಪ್ರತಿದಿನ ಒಂದೂವರೆ ಗಂಟೆ ಕಾರ್ಯನಿರ್ವಹಿಸುತ್ತಿವೆ.