ಸಕಲೇಶಪುರ: ಶಿಲಾನ್ಯಾಸಗೊಂಡು 13 ವರ್ಷಗಳ ನಂತರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಕಾಮಗಾರಿ ಪೂರ್ಣಗೊಂಡ ಎಂ.ವಿ.ಎ,66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆಯನ್ನು ಮಾಡಲು ಅಧಿಕಾರಿಗಳು ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಹೆತ್ತೂರು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
2006ರಲ್ಲಿ ಶಿಲಾನ್ಯಾಸ: ತಾಲೂಕಿನ ಹೆತ್ತೂರು ಹೋಬಳಿ ಸುತ್ತಮುತ್ತ ಸುಮಾರು ನೂರಕ್ಕೂ ಅಧಿಕ ಹಳ್ಳಿಗಳು ವ್ಯಾಪಕವಾದ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದನ್ನು ಮನಗಂಡ ಅಂದಿನ ಕಾಂಗ್ರೆಸ್ – ಜೆಡಿಎಸ್ ಸಮಿಶ್ರ ಸರ್ಕಾರದ ಇಂಧನ ಹಾಗೂ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು 2006ರ ಜ.26ರಂದು ಹೆತ್ತೂರು ಗ್ರಾಮದ ಹೊರ ವಲಯದಲ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಿಲಾನ್ಯಾಸವನ್ನು ವಿದ್ಯುತ್ ಕಂಭ ಎತ್ತುವುದರ ಮೂಲಕ ನೆರವೇರಿಸಿದ್ದರು.
ಆದರೆ ಈ ಕಾಮಗಾರಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಸುಮಾರು 13 ವರ್ಷಗಳ ನಂತರ ಪೂರ್ಣಗೊಂಡಿದ್ದು ಇದೀಗ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆಗೆ ಸಜ್ಜಾಗಿದ್ದು ಆದರೂ ಸಹ ಇದನ್ನು ಉದ್ಘಾಟನೆ ಮಾಡಲು ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾಗಿಲ್ಲ.
ವಿದ್ಯುತ್ ಸಮಸ್ಯೆ ನಿವಾರಿಸಿ: ಇನ್ನೇನು ಕೆಲವೆ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮಳೆಗಾಲ ಪ್ರಾರಂಭವಾಗುವ ಮುನ್ನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಿಸಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ ಮಾಡಿ ಮಲೆನಾಡಿನಲ್ಲಿ ಹೆಚ್ಚು ಮಳೆ ಬೀಳುವ ಹೆತ್ತೂರು ಭಾಗದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ.
ಕೆಲವೊಂದು ತಾಂತ್ರಿಕ ದೋಷಗಳು ಇರುವುದರಿಂದ ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟನೆ ಮಾಡಿಲ್ಲ. ಕೆಲವೇ ದಿನಗಳಲ್ಲಿ ತಾಂತ್ರಿಕ ದೋಷವನ್ನು ನಿವಾರಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಹೆತ್ತೂರು ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟಿಸಲಾಗುವುದು.
-ಎಚ್.ಕೆ. ಕುಮಾರಸ್ವಾಮಿ, ಶಾಸಕರು
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮುಗಿದಿದ್ದರು ಸಹ ಉದ್ಘಾಟನೆ ಮಾಡಿರುವುದಿಲ್ಲ. ಕೂಡಲೇ ಕಾಮಗಾರಿಯ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬೇಕು.
-ರವಿಕುಮಾರ್, ಹೆತ್ತೂರು ಗ್ರಾಮಸ್ಥ
* ಸುಧೀರ್ ಎಸ್.ಎಲ್