Advertisement

ಶೇಡಿಗದ್ದೆಗೆ ಬಂತು ವಿದ್ಯುತ್‌ ಬೆಳಕು!

09:37 AM Jun 02, 2019 | Team Udayavani |

ಕುಮಟಾ: ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಈವರೆಗೆ ಚಿಮಣಿ ದೀಪದಲ್ಲೇ ಜೀವನ ನಡೆಸುತ್ತಿದ್ದ ತಾಲೂಕಿನ ಯಾಣ ಸಮೀಪದ ಶೇಡಿಗದ್ದೆ ಗ್ರಾಮಕ್ಕೆ ಪಂ| ದೀನ ದಯಾಳ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಅಡಿ ಮಂಜೂರಾದ ವಿದ್ಯುತ್‌ಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕನಸಿನ ಯೋಜನೆಗಳಲ್ಲೊಂದಾದ ದೀನ್‌ ದಯಾಳ ಉಪಾಧ್ಯಾಯ ವಿದ್ಯುದ್ದೀಕರಣ ಯೋಜನೆ ಗ್ರಾಮೀಣ ಭಾಗಗಳ ಜನರ ಕಷ್ಟದ ಬದುಕಿಗೆ ಉಪಯೋಗವಾಗುತ್ತಿದೆ. ಈ ಕುಗ್ರಾಮಕ್ಕೆ ಬಂದು ಹೋಗುವುದೇ ಒಂದು ದೊಡ್ಡ ಸಾಹಸ. ಈ ಭಾಗದ ಶಾಸಕನಾಗಿ ಇಲ್ಲಿಯ ಜನರಿಗೆ ಮೂಲ ಸೌಕರ್ಯಗಳನ್ನು ದೊರಕಿಸಿಕೊಡುವುದು ನನ್ನ ಜವಾಬ್ದಾರಿ. ಕೇವಲ 12 ಮನೆಗಳಿಗೆ 150 ಕಂಬಗಳನ್ನು ಅಳವಡಿಸಿ ಎರಡು ವರ್ಷಗಳ ಹಿಂದೆ ಕಾರ್ಯರೂಪಕ್ಕೆ ಬಂದ ಈ ಯೋಜನೆ ಇಂದು ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ ಇಷ್ಟು ಮನೆಗಳಿಗೆ ವಿದ್ಯುತ್‌ ನೀಡಲಾಗಿದ್ದು, ಇನ್ನುಳಿದ ಮನೆಗಳಿಗೆ ಮುಂದಿನ ದಿನಗಳಲ್ಲಿ ಪೂರೈಸಲಾಗುತ್ತದೆ ಎಂದರು.

ಈ ಭಾಗದ ರಸ್ತೆಯ ಕುರಿತು ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ರಸ್ತೆ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುವುದು. ಈ ರಸ್ತೆಯಲ್ಲಿ ಸಿಗುವ ಕಾಲುಸಂಕಕ್ಕೆ ಕಿರುಸೇತುವೆ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದಾರೆ. ಈ ಗ್ರಾಮದ ಹಲವು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತೇನೆ ಎಂದರು.

ಜಿಪಂ ಸದಸ್ಯ ಗಜಾನನ ಪೈ ಮಾತನಾಡಿ, ಈ ಗ್ರಾಮಕ್ಕೆ ವಿದ್ಯುತ್‌ ಇಲ್ಲದಿರುವುದರಿಂದ ಇಲ್ಲಿಯ ಯುವಕರಿಗೆ ಹೆಣ್ಣು ಕೊಡುವುದಿಲ್ಲ ಎಂಬ ಮಾತೂ ಕೇಳಿ ಬರುತ್ತಿತ್ತು. ಅದಲ್ಲದೇ, ಅನೇಕ ವರ್ಷಗಳಿಂದ ವಿದ್ಯುತ್‌ ಇಲ್ಲದೆ ಇಲ್ಲಿಯ ಜನರು ಕರಾಳ ದಿನಗಳನ್ನು ಕಳೆದಿದ್ದಾರೆ. ಮೋದಿಯವರ ಹಾಗೂ ಶಾಸಕ ದಿನಕರ ಶೆಟ್ಟಿಯವರ ಪ್ರಾಮಾಣಿಕ ಪ್ರಯತ್ನದಿಂದ ಅದು ಈಗ ದೂರವಾಗಿದೆ. ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ದೀನ ದಯಾಳ ವಿದ್ಯುದ್ದೀಕರಣ ಯೋಜನೆ ಪ್ರಗತಿ ಹೊಂದಿದೆ ಎಂದರು.

ಸ್ಥಳೀಯ ವೆಂಕಟ್ರಮಣ ಮರಾಠಿ ಮಾತನಾಡಿ, ಇಷ್ಟು ವರ್ಷಗಳ ನಮ್ಮ ಕಷ್ಟದ ಬುದುಕು ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಭಾಗದ ಶಾಸಕ ದಿನಕರ ಶೆಟ್ಟಿ ಮತ್ತು ಜಿ.ಪಂ. ಸದಸ್ಯ ಗಜಾನನ ಪೈ ಅವರಿಂದ ಕೊಂಚ ದೂರವಾಗಿದೆ. ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಗ್ರಾಮಸ್ಥರು ಚಿರರುಣಿ. ಇವರಿಂದ ಈ ಗ್ರಾಮಕ್ಕೆ ಆಗುವಂತಹ ಇನ್ನುಳಿದ ಮೂಲ ಸೌಕರ್ಯ ಅಪೇಕ್ಷಿಸುತ್ತೇವೆ ಎಂದರು.

Advertisement

ವಿದ್ಯುತ್‌ ಸಂಪರ್ಕದಿಂದ ಗ್ರಾಮಸ್ಥರ ಹರ್ಷ ಮುಗಿಲು ಮುಟ್ಟಿತ್ತು. ಶೇಡಿಗದ್ದೆ ಗ್ರಾಮದ ಕಮಲಾಕರ ಮರಾಠಿ, ನಾಗವೇಣಿ ಮರಾಠಿ, ಶಿವರಾಮ ಮರಾಠಿ, ರಾಮಚಂದ್ರ ಪರಾಠಿ, ಗೋಪಾಲ ಪರಾಠಿ, ಸೋಮಾ ಮರಾಠಿ, ಗಣಪತಿ ಮರಾಠಿ, ಶೇಖರ ಮರಾಠಿ, ದಾಮೋದರ ಮರಾಠಿ, ಹರೀಶ ಮರಾಠಿ, ಲೂಮಾ ಮರಾಠಿ ಇವರ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಫಲಾನುಭವಿಗಳಿಗೆ ಬಲ್ಪ್ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next