Advertisement

ಕರೆಂಟ್‌ ಶಾಕ್‌ ಬೇಡ : ಮೂರನೇ ಬಾರಿ ವಿದ್ಯುತ್‌ ದರ ಏರಿಕೆ ಪ್ರಸ್ತಾವಕ್ಕೆ ಜನ ವಿರೋಧ

12:52 AM Mar 01, 2021 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ದರ ಏರಿಕೆಯದೇ ಸದ್ದು. ಪೆಟ್ರೋಲ್‌, ಅಗತ್ಯ ವಸ್ತುಗಳು, ಅಡುಗೆ ಅನಿಲ- ಹೀಗೆ
ಜನಸಾಮಾನ್ಯರ ದಿನಬಳಕೆಯ ಅಗತ್ಯ ವಸ್ತುಗಳ ದರ ಏರುತ್ತಲೇ ಇದೆ. ಇದರ ನಡುವೆ ರಾಜ್ಯದ ಎಲ್ಲ ಎಸ್ಕಾಂಗಳು ವಿದ್ಯುತ್‌ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಕಳೆದ ಹದಿನೈದು ದಿನಗಳಲ್ಲಿ ರಾಜ್ಯದ ಐದು ಎಸ್ಕಾಂ ವ್ಯಾಪ್ತಿಯಲ್ಲಿ ಕೆಇಆರ್‌ಸಿ ಪ್ರತ್ಯೇಕವಾಗಿ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಕೇಳಿಬಂದ ಧ್ವನಿ ಒಂದೇ – ಕರೆಂಟ್‌ ಶಾಕ್‌ ಬೇಡವೇ ಬೇಡ!

Advertisement

ದರ ಇಳಿಕೆಗೆ ಬಳಕೆದಾರರ ಆಗ್ರಹ
ಮೆಸ್ಕಾಂ ದರ ಏರಿಕೆ ಪ್ರಸ್ತಾವದ ಭಾಗವಾಗಿ ಫೆ. 19 ರಂದು ಮಂಗಳೂರಿನಲ್ಲಿ ಕೆಇಆರ್‌ಸಿ ಸಾರ್ವಜನಿಕ ಅಹವಾಲು ಸಭೆ ನಡೆದಿದ್ದು, ದರ ಏರಿಕೆಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು “ಏರಿಸುವುದಲ್ಲ, ಇಳಿಸಿ: ಗ್ರಾಹಕರ ಆಗ್ರಹ’ ಎಂದು “ಉದಯವಾಣಿ’ ಮುಖಪುಟ ದಲ್ಲಿ ವರದಿ ಮಾಡಿತ್ತು. ಯೂನಿಟ್‌ಗೆ 1.67 ರೂ. ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಜ. 3ರಂದು ಮುಖಪುಟ ವರದಿ ಪ್ರಕ ಟಿಸಿ ಗಮನ ಸೆಳೆದಿತ್ತು.

ಮೂರನೇ ಬಾರಿಗೆ ದರ ಏರಿ ಕೆ ಪ್ರಸ್ತಾವ
1. ನ. 1ರಿಂದಲೇ ಅನ್ವಯವಾಗುವಂತೆ ಪ್ರತೀ ಯೂನಿಟ್‌ಗೆ 40 ಪೈಸೆ ಹೆಚ್ಚಳ
2. ಡಿಸೆಂಬರ್‌ ತಿಂಗಳಲ್ಲಿ ತೈಲ ದರ ಹೊಂದಾಣಿಕೆಗಾಗಿ 8 ಪೈಸೆ ಹೆಚ್ಚಳ
3. ಈಗ ಎ. 1ರಿಂದ ಜಾರಿಯಾಗುವಂತೆ ದರ ಹೆಚ್ಚಿಸಲು ಎಸ್ಕಾಂಗಳ ಮನವಿ

ಹೆಚ್ಚಳ: ಎಸ್ಕಾಂ ಕೊಡುವ ಕಾರಣಗಳು
1. ವಿದ್ಯುತ್‌ ಖರೀದಿ ದರ ಏರಿಕೆ
2. ವಿದ್ಯುತ್‌ ಖರೀದಿಸದಿದ್ದರೂ ಉಷ್ಣ ಸ್ಥಾವರಗಳಿಗೆ ನಿರ್ದಿಷ್ಟ ಶುಲ್ಕ ಪಾವತಿ
3. ಕೋವಿಡ್‌ನಿಂದ ಎಚ್‌.ಟಿ. ವಿದ್ಯುತ್‌ ಬಳಕೆ ಪ್ರಮಾಣ ಇಳಿಕೆ

ನಷ್ಟ ತಗ್ಗಿಸಲು ಏನು ಮಾಡಬೇಕು?
– ಸರಕಾರವು ಬಾಕಿ ಉಳಿಸಿರುವ ಸಹಾಯಧನ ನೀಡಬೇಕು.
– ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಬಿಲ್‌ ಬಾಕಿ ಪಾವತಿಸಬೇಕು.
– ವಿದ್ಯುತ್‌ ಪ್ರಸರಣ ಮತ್ತು ಪೂರೈಕೆಯಲ್ಲಿ (ಟಿ ಆ್ಯಂಡ್‌ ಡಿ) ನಷ್ಟ ತಗ್ಗಿಸಬೇಕು.
– ಸೋರಿಕೆ ನಷ್ಟ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು.
– ನಿರ್ವಹಣ ಗುಣಮಟ್ಟ ಉತ್ತಮಗೊಳಿಸಬೇಕು.

Advertisement

ಮೆಸ್ಕಾಂಗೆ ಸರಕಾರದಿಂದ ಬರಲು ಬಾಕಿ ಇರುವ 800 ಕೋಟಿ ರೂ. ಮತ್ತು ಕೆಪಿಟಿಸಿಎಲ್‌ನಿಂದ ಇರುವ ಸುಮಾರು 200 ಕೋಟಿ ರೂ.ಗಳನ್ನು ಪಡೆದು ಕೊಳ್ಳಲು ಕ್ರಮ ಕೈಗೊಂಡರೆ ವಿದ್ಯುತ್‌ ದರ ಏರಿಸುವ ಅಗತ್ಯ ಇಲ್ಲ. ಒಂದು ಕಡೆ ಕೊರೊನಾ, ಇನ್ನೊಂದು ಕಡೆ ಆರ್ಥಿಕ ಹಿಂಜರಿತದ ಪರಿಸ್ಥಿತಿ ಇರುವ ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ವಿದ್ಯುತ್‌ ದರ ಏರಿಕೆ ಮಾಡುವುದೇ ಬೇಡ.
– ಐಸಾಕ್‌ ವಾಸ್‌, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಗಳೂರು

ಗ್ರಾಮೀಣ ಭಾಗದಲ್ಲಿ ಈಗಲೂ ಲೋ ವೋಲ್ಟೆಜ್‌ ಸಮಸ್ಯೆ ಇದೆ. ಇದರಿಂದಾಗಿ ವಿದ್ಯುತ್‌ ವಿತರಣೆಯಲ್ಲಿ ನಷ್ಟ ಆಗುತ್ತಿದೆ. ವೈಜ್ಞಾನಿಕ ವಿಧಾನಗಳಿಂದ ನಷ್ಟವನ್ನು ಸರಿದೂಗಿಸಿಕೊಳ್ಳುವ ಕೆಲಸವನ್ನು ಮೆಸ್ಕಾಂ ಮಾಡಬೇಕು ವಿನಾ ವಿದ್ಯುತ್‌ ದರವನ್ನು ಏರಿಸಬಾರದು.
– ರಾಮಕೃಷ್ಣ ಶರ್ಮ, ಜಿಲ್ಲಾಧ್ಯಕ್ಷರು, ಉಡುಪಿ ಜಿಲ್ಲಾ ಕೃಷಿಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next