ಕೊಪ್ಪ: ತಾಲೂಕಿನ ಕುಂಚೂರು ಗ್ರಾಮದಲ್ಲಿ ಅವಿವಾಹಿತ ಯುವಕನೊಬ್ಬ ವಿದ್ಯುತ್ ಟಿಸಿ ಬಳಿ ನಡೆದುಕೊಂಡು ಹೋಗುತ್ತಿರುವ ವೇಳೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತ ಯುವಕನನ್ನು ಸಚಿನ್ (28) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಮನೆಯ ಸಮೀಪವಿದ್ದ ಟಿಸಿ ಬಳಿ ನಡೆದುಕೊಂಡು ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಶಾಕ್ ತಗುಲಿದ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತ ಸಚಿನ್, ತಂದೆ, ತಾಯಿ ಹಾಗೂ ಸಹೋದರಿಯನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕುಂಚೂರಿನ ಜಮೀನನಲ್ಲಿ ಮಂಗಳವಾರ ನಡೆಯಿತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ಮೆಸ್ಕಾಂ ಇಲಾಖೆಯೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಭೇಟಿ ನೀಡಿದರು.
ಮೆರವಣಿಗೆ
ಮೃತ ಯುವಕ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಮಂಗಳವಾರ ಆಸ್ಪತ್ರೆಯ ಬಳಿ ಕಂಚೂರು ಗ್ರಾಮದ ಗ್ರಾಮಸ್ಥರು, ಸ್ನೇಹಿತರು, ಬಿಜೆಪಿ, ಹಿಂದೂ ಸಂಘಟನೆಯ ಕಾರ್ಯಕರ್ತರು ಆಗಮಿಸಿದ್ದರು. ನಂತರ ಆಸ್ಪತ್ರೆಯಿಂದ ಪಟ್ಟಣ ಮುಖ್ಯರಸ್ತೆ ಮೂಲಕ ಕುಂಚೂರಿನ ಮೃತರ ನಿವಾಸದ ವರೆಗೆ ಪಾರ್ಥಿವ ಶರೀರವನ್ನು ಮರೆವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಯಿತು. ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂಧು, ಮಿತ್ರರು ಭಾಗಿಯಾಗಿದ್ದರು.