ರಾಮದುರ್ಗ: ಗ್ರಾಮೀಣ ಪ್ರದೇಶದ ಹಲವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆಯ ಮನೆಯ ಮೇಲೆ ಹೆಸ್ಕಾಂ ವಿದ್ಯುತ್ ತಂತಿಗಳನ್ನು ಹಾಕಲಾಗಿದೆ. ಇದರಿಂದ ಮನೆ ನವೀಕರಣ ಸಂದರ್ಭದಲ್ಲಿ ಜನತೆ ಪರಿತಪಿಸುವಂತಾಗಿದೆ ಎಂದು ಸಮುದಾಯದ ಜನರು ಆರೋಪಿಸಿದರು.
ಪಟ್ಟಣದ ಮಿನಿವಿಧಾನ ಸೌಧದಲ್ಲಿ ನಡೆದ ಎಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಈ ಕುರಿತು ಹೆಸ್ಕಾಂ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಸಲ್ಲಿದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಕೂಡಲೇ ಸಮಸ್ಯೆ ಉಂಟಾಗುವ ಪ್ರದೇಶದಲ್ಲಿರುವ ವಿದ್ಯುತ್ ತಂತಿಗಳ ತೆರವಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳದಲ್ಲಿದ್ದ ಹೆಸ್ಕಾಂ ಎಇಇ ರಾಮಕೃಷ್ಣ ಗುಣಗಾ ಅವರಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಗೆ ಸರಕಾರ ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಹಲವು ಸಾಲ ಸೌಲಭ್ಯಗಳನ್ನು ಒದಗಿಸಿದ್ದು, ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದಕ್ಕೆ ಪರಿಹಾರ ಕಲ್ಪಿಸಿ ಎಂದು ಸಮುದಾಯದ ಜನತೆ ಒತ್ತಾಯಿಸುತ್ತಿದ್ದಂತೆ ಸ್ಥಳದಲ್ಲಿದ್ದ ಬ್ಯಾಂಕ್ ಅಧಿಕಾರಿಗಳಿಗೆ ಸರಕಾರದ ಸೌಲಭ್ಯಗಳ ಬ್ಯಾಂಕ್ ವ್ಯವಹಾರಕ್ಕೆ ಅನುಕೂಲ ಒದಗಿಸುವಂತೆ ಆಗ್ರಹಿಸಲಾಯಿತು.
ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ದಾಖಲಾತಿಗಳಿಗೆ ಅಲೆದಾಡಿಸದೇ ಅವಶ್ಯಕ ದಾಖಲಾತಿಗಳನ್ನು ಮಾತ್ರ ಪಡೆದು ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಬೇರೆ ಬೇರೆಡೆ ಕೂಲಿಗಾಗಿ ಹೋದ ಪಾಲಕರು ಮಕ್ಕಳ ವಿದ್ಯಾರ್ಥಿ ವೇತನದ ಸಲುವಾಗಿ ಅಲೆದಾಡುವುದು ಸರಿಯಲ್ಲ. ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್. ಕರ್ಕಿ ಪಾಲಕರಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳವುದಾಗಿ ತಿಳಿಸಿದರು.
ನಂತರ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ ಸಮುದಾಯದ ಜನತೆಯ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶೀಘ್ರ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.