Advertisement
ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಲೈನ್ ಮೇಲೆ ಮರದ ಕೊಂಬೆಗಳು ಮುರಿದು ಬೀಳುವುದರಿಂದ ಕಂಬ, ತಂತಿಗಳು ತುಂಡಾಗಿ ಸಮಸ್ಯೆಗಳು ಉದ್ಭವಿಸುತ್ತಿದೆ. ಬಹುತೇಕ ಗ್ರಾಮೀಣ ಭಾಗ ಅರಣ್ಯ ಪ್ರದೇಶದಿಂದ ಕೂಡಿರುವುದೇ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ರಾತ್ರಿಯಾಗುತ್ತಲೇ ವಿದ್ಯುತ್ ಸಮಸ್ಯೆ ಅಧಿಕವಾಗಿದ್ದು, ರಾತ್ರಿ ಇಡೀ ವಿದ್ಯುತ್ ಸರಬರಾಜಿರುವುದಿಲ್ಲ. ಕಳೆದ ಎರಡು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವಿಪರೀತ ಅಡಚಣೆಯಾಗುತ್ತಿದ್ದು ಒಂದೊಮ್ಮೆ ಬಂದರೂ ಕೇವಲ 5 ನಿಮಿಷ ಮಾತ್ರ ಇದ್ದು ಮತ್ತೆ ಹೋದರೆ ಬರುವುದು ಮರು ದಿನವೇ. ಇಲಾಖೆಯವರಿಗೆ ಫೋನಾಯಿಸಿದರೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಎಷ್ಟು ಬಾರಿ ಕರೆ ಮಾಡಿದರೂ ಹೆಚ್ಚಾಗಿ ಕಾರ್ಯನಿರತವಾಗಿರುತ್ತದೆ. ಒಂದೊಮ್ಮೆ ಕರೆ ಸ್ವೀಕರಿಸಿದರೆ 12 ಗಂಟೆಗೆ ಬರುತ್ತದೆ. ಲೈನ್ ನಲ್ಲಿ ರಿಪೇರಿ ನಡೆಯುತ್ತಿದೆ. ಟ್ರಿಪ್ ಆಗುತ್ತಿದೆ. ಫಾಲ್ಟ್ ಸಿಕ್ಕಿಲ್ಲ ಎನ್ನುವ ಸಮಜಾಯಿಷಿ ನೀಡಿ ಜಾರಿಕೊಳ್ಳುತ್ತಾರೆ. ಶಾಲಾ ಕಾಲೇಜು ಶುರುವಾಗಿದೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಅಡಚಣೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಬಾವಿ ಇಲ್ಲದೆ ಕೆರೆಯ ನೀರನ್ನು ಆಶ್ರಯಿಸಿರುವ ಮನೆಯವರಿಗೆ ಪಂಪ್ ಚಾಲನೆ ಮಾಡಲು ವಿದ್ಯುತ್ ಇಲ್ಲದೆ ಮಳೆ ನೀರನ್ನೇ ಆಶ್ರಯಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಕಾರ್ಯ ಪ್ರಗತಿ
ಗ್ರಾಮೀಣ ಭಾಗದಲ್ಲಿ ಮಳೆಗಾಲದ ಸಂದರ್ಭ ಗಾಳಿ ಬಂದಾಗ ವಿದ್ಯುತ್ ತಂತಿಗೆ ರಬ್ಬರ್ ಹಾಗೂ ಇನ್ನಿತರ ಮರಗಳ ಗೆಲ್ಲು ತಾಗಿ ವಿದ್ಯುತ್ ಟ್ರಿಪ್ ಆಗುತ್ತದೆ. ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಇನ್ನು ಎರಡು ದಿನದಲ್ಲಿ ಸಮಸ್ಯೆ ಪೂರ್ಣ ಬಗೆಹರಿಯಲಿದೆ. ಜೂ. 1 ರಿಂದ ಉಜಿರೆ ಹಾಗೂ ಬೆಳ್ತಂಗಡಿ ಸಬ್ ಡಿವಿಜನ್ ಗೆ ತಲಾ 10 ಮಂದಿಯ 2 ಬ್ಯಾಚ್ ಮಾಡಿ ಟ್ರೀ ಕಟ್ಟಿಂಗ್ ಕಾರ್ಯ ನಡೆಸಲಾಗುತ್ತಿದೆ.
– ಶಿವಶಂಕರ್, AE, ಮೆಸ್ಕಾಂ ಬೆಳ್ತಂಗಡಿ ಕರೆ ಸ್ವೀಕರಿಸಿ
ವಿದ್ಯುತ್ ಪೂರೈಕೆ ವ್ಯತ್ಯಯ ಎಂಬುದು ಇಲ್ಲಿ ನಿತ್ಯ ನಿರಂತರ. ಬೇಸಿಗೆಯಲ್ಲಿ ಲೈನ್ ಕಟ್ಟಿಂಗ್ ಎಂದು ದಿನಗಟ್ಟಲೆ ವಿದ್ಯುತ್ ತೆಗೆದು ಮಳೆಗಾಲ ಬಂದ ಕೂಡಲೇ ಮರ ಗಿಡಗಳು ಲೈನ್ ಮೇಲೆ ಬೀಳುವುದು ವಿಪರ್ಯಾಸ. ಸ್ಥಳೀಯ ಮುಂಡಾಜೆ ಮೆಸ್ಕಾಂನವರು ಗ್ರಾಹಕರ ಯಾವುದೇ ದೂರವಾಣಿ ಕರೆಗೆ ಸ್ಪಂದಿಸದಿರುವುದು ಶೋಚನೀಯ ವಿಚಾರ.
– ವಿದ್ಯುತ್ ಬಳಕೆದಾರ, ಮುಂಡಾಜೆ