ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿ ಹೊಂಗಡಹಳ್ಳ ಸಮೀಪದ ಕೊಂತನ ಮನೆ ಗ್ರಾಮದಲ್ಲಿನ ಯೋಧ ಎ.ಒ.ಉಮೇಶ್ ಅವರ ಮನೆಗೆ ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಕಳೆದ 9 ವರ್ಷದಿಂದ ಭಾರತೀಯ ಸೇನೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಪೂಂಛ ಸೆಕ್ಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಮೇಶ್, ಎರಡೂವರೆ ವರ್ಷಗಳ ಹಿಂದೆ ಕುಟುಂಬದವರಿಗೆ ಗ್ರಾಮದಲ್ಲಿ ಮನೆ ಯೊಂದನ್ನು ನಿರ್ಮಿಸಿದ್ದರು. ಆದರೆ, ವಿದ್ಯುತ್ ಸಂಪರ್ಕ ಮಾತ್ರ ದೊರಕಿರಲಿಲ್ಲ. ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ, ಹೆಂಡತಿ ಮತ್ತು ಚಿಕ್ಕ ಮಗುವಿದ್ದು, ಕಾಡಂಚಿನ ಗ್ರಾಮದಲ್ಲಿ ನಿತ್ಯವೂ ಆತಂಕದಲ್ಲೇ ಜೀವನ ಸಾಗಿಸಬೇಕಿತ್ತು.
ಹಲವಾರು ಬಾರಿ ತಾಲೂಕು ಆಡಳಿತ, ಸ್ಥಳೀಯ ಗ್ರಾಮ ಪಂಚಾಯ್ತಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯೋಧನ ಮನೆಗೆ ವಿದ್ಯುತ್ ಸಂಪರ್ಕ ಮಾತ್ರ ಕಲ್ಪಿಸಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ವಯಸ್ಸಾದ ಯೋಧನ ತಂದೆ ತಾಯಿ ವಿದ್ಯುತ್ ಸಂಪರ್ಕಕ್ಕಾಗಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಉದಯವಾಣಿಯಲ್ಲಿ ಯೋಧನ ಕುಟುಂಬ ಎದುರಿಸುತ್ತಿರುವ ಸಮಸ್ಯೆ ಕುರಿತು “ಯೋಧನ ಮನೆಗಿಲ್ಲ ಕರೆಂಟ್ ಭಾಗ್ಯ’ ಎಂಬ ಶೀರ್ಷಿಕೆಯಡಿ ಜ.2ರಂದು ಸುದ್ದಿಯನ್ನು ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿ ಕಾರಿ ಗಿರೀಶ್ ನಂದನ್ ತಕ್ಷಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳು ಯೋಧನ ಮನೆಗೆ ವಿದ್ಯುತ್ ಬರುವಂತೆ ಮಾಡಿದ್ದಾರೆ. ಇದರಿಂದ ಯೋಧನ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ.
ಇದನ್ನೂ ಓದಿ :ಬೆಲೆಯ ಸುಳಿಯಲ್ಲಿ ಕಾಫಿ ಬೆಳೆಗಾರರು
ಯೋಧ ಉಮೇಶ್ ಹಾಗೂ ಯುವ ರೈತ ಸಂಘದ ಕಾರ್ಯದರ್ಶಿ ಕೀರ್ತಿ ಕುಮಾರ್ ಉದಯವಾಣಿಯ ಸಾಮಾಜಿಕ ಕಾಳಜಿಯನ್ನು ಶ್ಲಾಸಿದ್ದಾರೆ.