ಮಹಾನಗರ: ತೈಲ ದರ ಏರಿಕೆಗೆ ಪರ್ಯಾಯವಾಗಿ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾದರೂ ಇವಿ ಚಾರ್ಜಿಂಗ್ ಸ್ಟೇಶನ್ ಮಾತ್ರ ಇಲ್ಲ!
ಎಲೆಕ್ಟ್ರಿಕ್ ವಾಹನಗಳಿಗೆ ಆವಶ್ಯಕವಾಗುವ ನಿಟ್ಟಿನಲ್ಲಿ ನಗರದ ಆಯ್ದ ಭಾಗಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಶನ್ ಸ್ಥಾಪನೆಗೆ ಮೆಸ್ಕಾಂ ಯೋಜನೆ ರೂಪಿಸಿ ಹಲವು ಸಮಯ ಆಗಿದೆಯಾದರೂ ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ಎಲೆಕ್ಟ್ರಿಕ್ ವಾಹನದವರು ಚಾರ್ಜಿಂಗ್ ಮಾಡಲು ಈಗ ಮನೆಯನ್ನು ಅವಲಂಬಿಸಬೇಕಾಗಿದೆ. ಜತೆಗೆ ಕೆಲವು ಮಾಲ್ ಅಥವಾ ಶೋರೂಂಗಳಲ್ಲಿ ಹಣ ನೀಡಿ ಚಾರ್ಜಿಂಗ್ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿ 2019ರಲ್ಲಿ 51 ಎಲೆಕ್ಟ್ರಿಕ್ ವಾಹನವಿದ್ದರೆ, 2020ರಲ್ಲಿ ಈ ಸಂಖ್ಯೆ 117ಕ್ಕೆ ಏರಿತ್ತು. ಆದರೆ, ಈ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನ ಗಳ ಸಂಖ್ಯೆ ದುಪ್ಪಟ್ಟಾಗಿದ್ದು ಬರೋಬ್ಬರಿ 891 ವಾಹನಗಳು ನೋಂದಣಿಯಾಗಿದೆ. ಇದರಲ್ಲಿ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆಯೇ ಅಧಿಕ.
ಇತ್ತೀಚೆಗೆ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಮಂಗಳೂರಿಗೆ ಆಗಮಿಸಿ ಮೆಸ್ಕಾಂ ವತಿಯಿಂದ ಚಾರ್ಜಿಂಗ್ ಕೇಂದ್ರ ಆರಂಭಿಸುವ ಬಗ್ಗೆ ಮತ್ತೂಮ್ಮೆ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಮೆಸ್ಕಾಂ ವತಿಯಿಂದ ನಗರದ ಕೆಲವು ಪ್ರದೇಶದ ಸರ್ವೆ ಕೂಡ ನಡೆಸ ಲಾಗಿದೆ. ಆದರೆ ಇನ್ನೂ ಇದು ಅಂತಿಮವಾಗಿಲ್ಲ. ಈ ಮಧ್ಯೆ ಬೆಂಗಳೂರಿನಲ್ಲಿ ಬೆಸ್ಕಾಂ ವತಿಯಿಂದ ನಗರದ ವಿವಿಧ ಪ್ರದೇಶಗಳಲ್ಲಿ 12 ಡಿ.ಸಿ. ಫಾಸ್ಟ್ ಚಾರ್ಜಿಂಗ್ ಕೇಂದ್ರ ಹಾಗೂ 100 ಎ.ಸಿ. ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ.
ರಿಕ್ಷಾ ಚಾಲಕರೊರ್ವರು “ಸುದಿನ’ ಜತೆಗೆ ಮಾತನಾಡಿ, “ಎಲೆಕ್ಟ್ರಿಕ್ ರಿಕ್ಷಾ ವಿಭಿನ್ನ ಅನುಭವ ನೀಡುತ್ತದೆ. 4 ಗಂಟೆ ಮನೆಯಲ್ಲಿಯೇ ಚಾರ್ಜ್ ಮಾಡಿ ನಗರದಲ್ಲಿ ಸುಮಾರು 120 ಕಿ.ಮೀ.ವರೆಗೆ ಸಂಚರಿಸಬಹುದಾಗಿದೆ. ಆದರೆ, ನಗರದಲ್ಲಿ ಎಲ್ಲಿಯೂ ಚಾರ್ಜಿಂಗ್ ವ್ಯವಸ್ಥೆ ಇಲ್ಲದ ಕಾರಣದಿಂದ ಕೆಲವು ಸಂದರ್ಭ ದೂರ ಪ್ರದೇಶಕ್ಕೆ ಬಾಡಿಗೆ ಮಾಡಲು ಹೆದರಿಕೆ ಆಗುತ್ತದೆ. ಹೀಗಾಗಿ ನಗರದಲ್ಲಿ ಚಾರ್ಜಿಂಗ್ ಕೇಂದ್ರ ತೆರೆಯಲು ಸರಕಾರ ಒತ್ತು ನೀಡಬೇಕು’ ಎನ್ನುತ್ತಾರೆ.
“ಚಾರ್ಜಿಂಗ್ ಕೇಂದ್ರದ ಬಗ್ಗೆ ಸರಕಾರಕ್ಕೆ ವರದಿ’ ಇ-ಸಂಚಾರವನ್ನು ಉತ್ತೇಜಿಸುವ ಸಲುವಾಗಿ ವಿದ್ಯುತ್ ವಾಹನಗಳ ಸಂಖ್ಯೆ ನಗರದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಆದರೆ ಸದ್ಯ ಇವಿ ಚಾರ್ಜಿಂಗ್ ಸ್ಟೇಶನ್ ನಗರದಲ್ಲಿ ಲಭ್ಯವಿಲ್ಲ. ಹೀಗಾಗಿ ಸರಕಾರದ ವತಿಯಿಂದಲೇ ಚಾರ್ಜಿಂಗ್ ಸ್ಟೇಶನ್ ತೆರೆಯುವ ಸಂಬಂಧ ಚಿಂತನೆ ನಡೆಸಲಾಗಿದೆ. ನಗರದ ಯಾವ ಪ್ರದೇಶದಲ್ಲಿ ಚಾರ್ಜಿಂಗ್ ಕೇಂದ್ರ ತೆರೆಯಬೇಕು ಎಂಬ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
–ಆರ್.ಎಂ. ವರ್ಣೇಕರ್, ಆರ್‌ಟಿಒ, ಮಂಗಳೂರು