ಬೆಂಗಳೂರು: ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಪಿ.ಜಿ. ನಿವಾಸಿ ಶ್ರೀನಿವಾಸ್(23) ಮೃತ ವಿದ್ಯಾರ್ಥಿ. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಪೇಯಿಂಗ್ ಗೆಸ್ಟ್‌ನಲ್ಲಿ ಘಟನೆ ನಡೆದಿದೆ.
ಬೀದರ್ ಮೂಲದ ಶ್ರೀನಿವಾಸ್, ಬಿಎಸ್ಸಿ ಪದವೀಧರನಾಗಿದ್ದು, ಕಂಪ್ಯೂಟರ್ ಕೋರ್ಸ್ ವ್ಯಾಸಂಗಕ್ಕಾಗಿ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು, ಪಿಜಿಯಲ್ಲಿ ವಾಸವಾಗಿದ್ದ. ಶುಕ್ರವಾರ ರಾತ್ರಿ ಶೌಚಾಲಯಕ್ಕೆ ಹೋಗಿ ವಾಪಸ್ ಬಂದು ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ.
ಕೆಲ ಹೊತ್ತಿನ ಬಳಿಕ ಪಿಜಿಗೆ ಬಂದ ಸ್ನೇಹಿತರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ರೀನಿವಾಸ್‌ನನ್ನು ಎಚ್ಚರಿಸಲು ಮುಂದಾಗಿದ್ದಾರೆ. ಆಗ ಆತನ ಸ್ನೇಹಿತರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಬಳಿಕ ರೂಮ್‌ನಲ್ಲಿ ವಿದ್ಯುತ್ ಸ್ಥಗಿತಗೊಳಿಸಿ, ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಪರೀಕ್ಷಿಸಿದ ವೈದ್ಯರು, ಮಾರ್ಗ ಮಧ್ಯೆಯೇ ಶ್ರೀನಿವಾಸ್ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶನಿವಾರ ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.