ವಿಟ್ಲ : ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಎಡ್ಜ್ ಫ್ಯೂಸ್ ಹಾಕಲೆಂದು ವಿದ್ಯುತ್ ಪರಿವರ್ತಕಕ್ಕೇರಿದ ಯುವಕ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ.
ಕರೋಪಾಡಿ ಗ್ರಾಮದ ಕುರೋಡಿ ಫೆಲಿಕ್ಸ್ ಮೊಂತೆರೊ(39) ಸಾವನ್ನಪ್ಪಿದವರು. ಅವರು ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಮೆಸ್ಕಾಂ ಗುತ್ತಿಗೆ ಆಧಾರದ ನೌಕರನಾಗಿದ್ದ ಫೆಲಿಕ್ಸ್ ಮೊಂತೆರೊ ಲೈನ್ ಸಂಪರ್ಕ ತಾನೇ ಕಡಿತಗೊಳಿಸಿ, ವಿದ್ಯುತ್ ಪರಿವರ್ತಕಕ್ಕೇರಿದ್ದರು. ಹೆ„ಟೆನ್ಶನ್ ಲೆ„ನ್ ಸ್ವಿಚ್ ಆಫ್ ಮಾಡಿದ್ದರೂ ಒಂದು ತಂತಿಯ ಸಂಪರ್ಕ ಕಡಿದುಕೊಂಡಿರಲಿಲ್ಲ. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನು ಗಮನಿಸದ ಫೆಲಿಕ್ಸ್ ಎಡ್ಜ್ ಫ್ಯೂಸ್ ಹಾಕಲೆತ್ನಿಸಿದಾಗ ವಿದ್ಯುತ್ ಶಾಕ್ ಬಡಿದಿದೆ. ವಿದ್ಯುತ್ ಪರಿವರ್ತಕದಿಂದ ಎಸೆಯಲ್ಪಟ್ಟು ಕೆಳಗೆ ಬಿದ್ದ, ಅವರನ್ನು ಆಸ್ಪತ್ರೆಗೆ ಒಯ್ಯುವ ಮುನ್ನವೇ ಕೊನೆಯುಸಿರೆಳೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಖಾಯಮಾತಿಗೆ ಆಗ್ರಹ
ಫೆಲಿಕ್ಸ್ ಮೊಂತೆರೊ ಗುತ್ತಿಗೆ ನೌಕರರಾಗಿದ್ದರೂ ಗ್ರಾಮದಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಕಾರ್ಯ ಗಳನ್ನು ತತ್‌ಕ್ಷಣ ಸರಿ ಪಡಿಸುತ್ತಿದ್ದರು. ಮೆಚ್ಚುಗೆಗೆ ಪಾತ್ರ ರಾಗಿದ್ದ ಅವರನ್ನು ಮೆಸ್ಕಾಂ ಖಾಯಂ ಗೊಳಿಸಬೇಕೆಂದು ಗ್ರಾಮಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದ್ದರು.
ಈ ಬಗ್ಗೆ ನಿರ್ಣಯವನ್ನು ಕೂಡ ಮೆಸ್ಕಾಂಗೆ ನೀಡಲಾಗಿತ್ತು. ಅವರ ಅಕಾಲಿಕ ನಿಧನದಿಂದ ದುಃಖತಪ್ತವಾಗಿರುವ ಕುಟುಂಬಕ್ಕೆ ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಕರೋಪಾಡಿ ಗ್ರಾ.ಪಂ.ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.