Advertisement

ಶಾಲೆಗೆ ಹೋಗುವ ದಾರಿಯಲ್ಲೂ ವಿದ್ಯುತ್‌ ಶಾಕ್‌ !

09:57 AM Oct 03, 2018 | |

ಮಹಾನಗರ: ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಹಿಂತಿರುಗಿ ಬರುತ್ತಾರೆ ಎಂದು ನಂಬಿರುವ ಪಾಲಕರು ಮತ್ತು ಶಾಲೆಯಿಂದ ಮಕ್ಕಳು ಸುರಕ್ಷಿತವಾಗಿ ತೆರಳುತ್ತಾರೆ ಎಂಬ ನಂಬಿಕೆಯಲ್ಲಿರುವ ಶಿಕ್ಷಕರಿಗೂ ಇದು ಶಾಕಿಂಗ್‌ ವಿಚಾರ. ಏಕೆಂದರೆ ಶಾಲೆಗಳ ಬಳಿಯಲ್ಲಿಯೂ ಎಚ್ಚರ ವಹಿಸದೆ ಹೋದರೆ ವಿದ್ಯುತ್‌ ಸರಬರಾಜು ಪೆಟ್ಟಿಗೆಗಳು ಶಾಕ್‌ ನೀಡುವ ರೀತಿಯಲ್ಲಿ ಬಾಯ್ದೆರೆದುಕೊಂಡಿವೆ!

Advertisement

ನಗರದ ಪ್ರಮುಖ ಶಾಲೆಗಳ ಆಸು- ಪಾಸಿನಲ್ಲಿ ಬೀದಿ ದೀಪ, ವಿದ್ಯುತ್‌ ಸಂಪರ್ಕ ಮತ್ತು ವಿದ್ಯುತ್‌ ಸರಬರಾಜಿಗೆ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ ಎಷ್ಟೊಂದು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ ಎಂಬ ಬಗ್ಗೆ “ಸುದಿನ’ವು ಹಲವು ಶಾಲೆಗಳ ಬಳಿ ರಿಯಾಲಿಟಿ ಚೆಕ್‌ ನಡೆಸಿದೆ. ಆದರೆ, ಮಂಗಳೂರು ನಗರದ ವಿವಿಧ ಶಾಲೆ- ಕಾಲೇಜುಗಳ ಬಳಿ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌, ಬೀದಿದೀಪಗಳನ್ನು ಅಪಾಯ ಸೂಚಿಸುವ ರೀತಿ ಅಳವಡಿಸಿರುವುದು ಕಂಡುಬಂದಿದೆ.

ತೆರೆದ ಸ್ಥಿತಿಯಲ್ಲಿ ವಿದ್ಯುತ್‌ ಪೆಟ್ಟಿಗೆ
ಪದುವಾ ಶಿಕ್ಷಣ ಸಂಸ್ಥೆಗೆ ತೆರಳುವ ಯೆಯ್ನಾಡಿ ಒಳರಸ್ತೆ ಬದಿಯಲ್ಲಿ ಎರಡು ಕಡೆಗಳಲ್ಲಿ ಬೀದಿದೀಪ ಪೆಟ್ಟಿಗೆಗಳು ತೆರೆದ ಸ್ಥಿತಿಯಲ್ಲಿವೆ. ಇದು ವಿದ್ಯಾರ್ಥಿಗಳ ಓಡಾಟದ ರಸ್ತೆಯಾದ್ದರಿಂದ ಯಾವುದೇ ಕ್ಷಣದಲ್ಲೂ ಅಪಾಯಕ್ಕೆ ಮುನ್ಸೂಚನೆ ನೀಡುವಂತಿದೆ. ತೆರೆದ ಪೆಟ್ಟಿಗೆ ಕೈಗೆಟಕುವಂತಿದ್ದು, ಆಟವಾಡುತ್ತಾ ಒಳಗಿನ ತಂತಿ ಗಳನ್ನು ಮಕ್ಕಳು ಎಳೆದರೆ ಅಪಾಯ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಹೆಚ್ಚಿರುವ ಕೆಪಿಟಿ ಬಸ್‌ ನಿಲ್ದಾಣದ ಬಳಿಯೂ ವಿದ್ಯುತ್‌ ಪ್ರವಹಿಸುವ ಪೆಟ್ಟಿಗೆ ತೆರೆದ ಸ್ಥಿತಿಯಲ್ಲಿದೆ.

ಅಪಾಯ ಸಂಭವ
ಎಂಜಿ ರಸ್ತೆಯಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಆದರೆ ಈ ರಸ್ತೆಯಲ್ಲಿ ತಿರುವು ಪಡೆದು ಬಿಜೈಗೆ ತೆರಳುವ ರಸ್ತೆ ಬದಿಯಲ್ಲಿ ಬೀದಿದೀಪ ಪೆಟ್ಟಿಗೆ ಬಾಯ್ದೆರೆದು ನಿಂತಿದ್ದು, ತಂತಿಗಳು ಕೂಡ ಹೊರ ಚಾಚಿಕೊಂಡಿವೆ. ಇಲ್ಲಿ ವಾಹನಗಳ ನಿಲುಗಡೆಯನ್ನೂ ಮಾಡುವುದರಿಂದ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಹೊರ ಚಾಚಿರುವ ತಂತಿಗಳು ಕೂಡ ಕೆಳಗೆ ಜೋತು ಬಿದ್ದಿದ್ದು, ಸ್ವಲ್ಪ ತಾಗಿದರೂ, ಅಪಾಯವಾಗುವ ಸಂಭವ ತಪ್ಪಿದ್ದಲ್ಲ.

ಮೀಟರ್‌ ಬಾಕ್ಸ್‌ಗೆ ತುಕ್ಕು
ಬೆಂದೂರ್‌ವೆಲ್‌ನಿಂದ ಬಲ್ಮಠಕ್ಕೆ ತಿರುವು ಪಡೆಯುವಲ್ಲಿಯೂ ಕಂಬದಲ್ಲಿರುವ ಮೀಟರ್‌ ಬಾಕ್ಸ್‌ ತೆರೆದುಕೊಂಡಿದೆ. ಬಾಕ್ಸ್‌ ಕೂಡಾ ತುಕ್ಕು ಹಿಡಿದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಆಟವಾಡುತ್ತಾ, ಮಾತನಾಡುತ್ತಾ ತೆರಳುವ ಮಕ್ಕಳಿಗೆ ಸಾಮಾನ್ಯವಾಗಿ ಈ ಮೀಟರ್‌ ಬಗ್ಗೆ ತಿಳಿಯದೆ, ಮಕ್ಕಳಾಟಕ್ಕಾಗಿ ಕೈ ಹಾಕುವ ಸನ್ನಿವೇಶಗಳಿರುತ್ತವೆ. ಅಲ್ಲದೆ ಮಳೆ, ಗುಡುಗು, ಸಿಡಿಲಿನ ಸಂದರ್ಭದಲ್ಲಿ ಇಲ್ಲಿ ನಡೆದಾಡುವುದು ತೀರಾ ಅಪಾಯಕಾರಿಯಾಗಿದೆ.

Advertisement

ಗಮನ ಅಗತ್ಯ
ಬಿಇಎಂ ಶಾಲೆಗೆ ಪ್ರವೇಶಿಸುವಲ್ಲೆ ರಸ್ತೆ ಬದಿಯಲ್ಲಿ ವಿದ್ಯುತ್‌ ಬಾಕ್ಸ್‌ ಒಂದಿದೆ. ಆದರೆ ಈ ಬಾಕ್ಸ್‌ ಇರುವ ಕಂಬದಲ್ಲಿ ಜಾಹೀರಾತು ಫಲಕ ಅಳವಡಿಸಿರುವುದರಿಂದ ವಿದ್ಯುತ್‌ ಚಾಲನೆ ಇದೆಯೇ ಎಂಬುದು ಗೊತ್ತಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಇದನ್ನು ತೆರೆದಿಡದೆ, ಸುವ್ಯವಸ್ಥಿತವಾಗಿ ಮುಚ್ಚಿಡುವಲ್ಲಿ ಸಂಬಂಧಪಟ್ಟ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಗಮನ ಹರಿಸಬೇಕಿದೆ.

ಡಿವೈಡರ್‌ನಲ್ಲೇ ಕಾದಿದೆ ಅಪಾಯ!
ಹಂಪನಕಟ್ಟೆ ವಿಶ್ವ ವಿದ್ಯಾನಿಲಯ ಕಾಲೇಜು ಮುಂಭಾಗದ ಮುಖ್ಯ ರಸ್ತೆಯ ಡಿವೈಡರ್‌ನಲ್ಲಿ ಬೀದಿ ದೀಪ ಕಂಬದ ತಂತಿ ಹೊರ ಚಾಚಿಕೊಂಡಿದ್ದು, ದುರದೃಷ್ಟ ವಶಾತ್‌ ಕಾಲಿಟ್ಟರೆ ಅಪಾಯ ಖಂಡಿತಾ. ದಿನಂಪ್ರತಿ ಅನೇಕ ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ಕ್ರಾಸ್‌ ಮಾಡಲು ಈ ಡಿವೈಡರ್‌ನಲ್ಲಿ ನಿಲ್ಲುತ್ತಾರೆ. ವಾಹನಗಳನ್ನು ನೋಡುವ ಭರದಲ್ಲಿ ಈ ತಂತಿಗಳ ಮೇಲೆ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ಕೈಗೆಟಕುವ ಟ್ರಾನ್‌ಫಾರ್ಮರ್ 
ಡೊಂಗರಕೇರಿ ಕೆನರಾ ಶಾಲೆಯ ಹಿಂಬದಿ ಇರುವ ಸಾರ್ವಜನಿಕ ರಸ್ತೆಯಲ್ಲಿ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಬಾಯ್ದೆರೆದಿದೆ. ಇಲ್ಲಿ ಸನಿಹದ ಎಲ್ಲ ಶಾಲೆಯ ವಿದ್ಯಾರ್ಥಿಗಳೂ ಓಡಾಡುತ್ತಿರುವುದರಿಂದ ಮತ್ತು ಟ್ರಾನ್ಸ್‌ಫಾರ್ಮರ್‌ ಕೈಗೆಟಕುವಂತಿರುವುದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಖಚಿತ.

ಟ್ರಾನ್ಸ್‌ಫಾರ್ಮರ್‌ ಪೆಟ್ಟಿಗೆ ಇಷ್ಟೇ
ಎತ್ತರದಲ್ಲಿರಬೇಕೆಂಬ ನಿಯಮವಿದೆ. ಆ ನಿಯಮಕ್ಕೆ ಅನುಸಾರ ಬಾಕ್ಸ್‌ ಅಳವಡಿಸಲಾಗುತ್ತದೆ. ಆದರೂ, ವಿದ್ಯುತ್‌ ತಂತಿ ನೇತಾಡುತ್ತಿರುವುದು ಅಥವಾ ಟ್ರಾನ್ಸ್‌ಫಾರ್ಮರ್‌ ಬಾಕ್ಸ್‌ ತೀರಾ ಕೆಳಭಾಗದಲ್ಲಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಬೀದಿದೀಪ ಪೆಟ್ಟಿಗೆ ನಿರ್ವಹಣೆ ಪಾಲಿಕೆ ವ್ಯಾಪ್ತಿಗೆ ಬರುತ್ತದೆ.
 - ಕೃಷ್ಣರಾಜ್‌,
   ಕಾರ್ಯಕಾರಿ ಅಭಿಯಂತರ, ಮೆಸ್ಕಾಂ

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next