ಬೆಂಗಳೂರು: ಪೆಟ್ರೋಲ್, ಡಿಸೇಲ್ ಆಟೋಗಳಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಮಾಲಿನ್ಯ ತಡೆಗೆ ಇದೀಗ ವಿದ್ಯುತ್ ಚಾಲಿತ ಆಟೋ ರಿಕ್ಷಾ ಮಾರುಕಟ್ಟೆಗೆ ಬರುತ್ತಿದೆ. ಹೌದು, ಇಂಥದ್ದೊಂದು ಯೋಜನೆಗೆ ಕೆನೆಟಿಕ್ ಗ್ರೀನ್ ಎಂಬ ಸಂಸ್ಥೆ ಮುಂದಾಗಿದ್ದು, ಶೀಘ್ರವೇ ಬೆಂಗಳೂರಿನ ರಸ್ತೆಗಳಲ್ಲೂ ಕೂಡ ಮಾಲಿನ್ಯ ರಹಿತ ವಿದ್ಯುತ್ ಆಟೋ ರಿಕ್ಷಾಗಳು ಸಂಚರಿಸಲಿವೆ.
ದೆಹಲಿ ಮೆಟ್ರೋ ರೈಲು, ಎಚ್‌ಎಸ್‌ಐಐಡಿಸಿ ಮತ್ತು ರ್ಯಾಪಿಡ್ ಮೆಟ್ರೋ ಸಹಯೋಗದಲ್ಲಿ ಗುರುಗ್ರಾಮದಲ್ಲಿ ಪ್ರಾಯೋಗಿಕವಾಗಿ ಕೈನೆಟಿಕ್ ಗ್ರೀನ್ ಸಂಸ್ಥೆ ಬಿಡುಗಡೆ ಮಾಡಿದ್ದ 500 ವಿದ್ಯುತ್ ಆಟೋರಿಕ್ಷಾಗಳ ಓಡಾಟ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲೂ ಕೂಡ ವಿದ್ಯುತ್ ಆಟೋ ರಿಕ್ಷಾಗಳನ್ನು ಪರಿಚಯಿಸುವುದಾಗಿ ಕೆನೆಟಿಕ್ ಗ್ರೀನ್ ಸಂಸ್ಥೆ ಹೇಳಿದೆ.
ಕೈಗೆಟುಕುವ ದರದಲ್ಲಿ ಆಟೋ ಲಭ್ಯವಾಗಲಿದೆ. ಇದಕ್ಕೆ ಕೆನೆಟಿಕ್ ಗ್ರೀನ್ ಮತ್ತು ಸ್ಮಾರ್ಟ್ ಇ ಸಂಸ್ಥೆಗಳು ಜಂಟಿಯಾಗಿ ಕೈಹಾಕಿದ್ದು, ಮುಂದಿನ 18 ತಿಂಗಳಲ್ಲಿ ದೇಶಾದ್ಯಂತ 10 ಸಾವಿರ ವಿದ್ಯುತ್ ಚಾಲಿತ ಆಟೋಗಳನ್ನು ಪರಿಚಯಿಸುವುದಾಗಿ ಸ್ಮಾರ್ಟ್ ಇ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸಲ್ಯೂಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲಜ್ಜಾ ಫಿರೋದಿಯಾ ಮೋಟ್ವಾನಿ, “ಕೈಗೆಟುಕುವ ದರದ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು ವಿದ್ಯುತ್ ಆಟೋರಿಕ್ಷಾಗಳ ಬಿಡುಗಡೆ ಮಾಡಲಾಗುತ್ತಿದೆ.
ಈಗಾಗಲೇ ದೆಹಲಿಯಲ್ಲಿ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಮಾಲಿನ್ಯ ರಹಿತ ಹಸಿರು ಆಟೋ ರಿಕ್ಷಾಗಳಿಂದ ಪರಿಸರಕ್ಕೆ ಇಂಗಾಲದ ಡೈ ಆಕ್ಸೆ„ಡ್ ಸೇರುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ,’ ಎಂದು ತಿಳಿಸಿದರು.
ಸ್ಮಾರ್ಟ್-ಇ ಸಹ ಸ್ಥಾಪಕ ಗೋಲ್ಡಿ ಶ್ರೀವಾಸ್ತವ, “ಕೆನೆಟಿಕ್ ಗ್ರೀನ್ ಸಂಸ್ಥೆಯೊಂದಿಗಿನ ಸಹಭಾಗಿತ್ವ ಸಂತಸ ತಂದಿದೆ. 2030ರ ವೇಳೆಗೆ ಶೇ.100ರಷ್ಟು ವಿದ್ಯುತ್ ಚಾಲಿನ ವಾಹನಗಳು ದೇಶದೆಲ್ಲೆಡೆ ಸಂಚರಿಸಲಿವೆ. ದೇಶದಲ್ಲಿ ವಿಶ್ವದರ್ಜೆಯ ವಿದ್ಯುತ್ ಚಾಲಿತ ಸಂಚಾರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ಹೈಡ್ರೋಕಾರ್ಬನ್ ಆಧಾರಿತ ವಾಹನ ಮಾಲಿನ್ಯ ಇಲ್ಲದಂತೆ ಮಾಡುವ ಸವಾಲನ್ನು ಸ್ವೀಕರಿಸಿದ್ದೇವೆ,’ ಎಂದು ತಿಳಿಸಿದ್ದಾರೆ.