ಬೀದರ: ವಿಕಾರಾಬಾದನಿಂದ ಪರಳಿವರೆಗಿನ 262 ಕೋಟಿ ರೂ. ವೆಚ್ಚದ 269 ಕಿ.ಮೀ. ರೈಲ್ವೆ ವಿದ್ಯುತ್ತೀಕರಣ ಕಾಮಗಾರಿ ಪೈಕಿ ವಿಕಾರಾಬಾದ-ಖಾನಾಪೂರ ನಡುವಿನ 105 ಕಿ.ಮೀ. ರೈಲ್ವೆ ಲೈನ್ ಕೆಲಸ ಕಾಮಗಾರಿ ಪೂರ್ಣಗೊಂಡಿದ್ದು, ಜ.24ರಿಂದ ಈ ಹಳಿಗಳ ಮೂಲಕ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ವಿದ್ಯುತ್ತೀಕರಣ ಲೈನ್‌ನಲ್ಲಿ ಟ್ರಯಲ್ ರನ್ ಕೂಡ ಮುಗಿದಿದ್ದು, ನಾಳೆಯಿಂದ ಬೀದರ- ಯಶವಂತಪುರ (16571, ನಾಲ್ಕು ದಿನ) ಮತ್ತು ಯಶವಂತಪುರ- ಬೀದರ (16572 ನಾಲ್ಕು ದಿನ) ರೈಲು ಸಂಚರಿಸಲಿದೆ. ಜತೆಗೆ ಬೀದರ- ಹೈದ್ರಾಬಾದ (17010), ಹೈದ್ರಾಬಾದ- ಬೀದರ ಇಂಟರ್‌ಸಿಟಿ (17009), ಬೀದರ- ಮಚ್ಚಲಿಪಟ್ನಂ (12750), ಮಚ್ಚಲಿಪಟ್ನಂ- ಬೀದರ (12749) ಪ್ರತಿನಿತ್ಯ ರೈಲುಗಳು ಈ ವಿದ್ಯುತ್ತೀಕರಣಗೊಂಡ ರೈಲ್ವೆ ಲೈನ್ ಮೂಲಕ ಚಲಿಸಲಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬೀದರ ಲೋಕಸಭಾ ಕ್ಷೇತ್ರಕ್ಕೆ 2014ರ ನಂತರ ರೈಲ್ವೆ ಇಲಾಖೆಯಿಂದ ವಿಶೇಷ ಕೊಡುಗೆಗಳು ಸಿಕ್ಕಿವೆ. ವಿದ್ಯುತ್ತೀಕರಣ ಮೂಲಕ ಹೋಗುತ್ತಿರುವ ಈ ರೈಲುಗಳು ಬೀದರ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಬೀದರನಿಂದ ವಿಕಾರಬಾದ್‌ವರೆಗೆ ಮೊದಲು ರೈಲು ಸಂಚರಿಸಿ 88 ವರ್ಷಗಳ ಬಳಿಕ ಬೀದರನಿಂದ ಪ್ರಥಮ ಬಾರಿಗೆ ವಿದ್ಯುತ್ತೀಕರಣದ ಲೈನ್ ಮೇಲೆ ನಮ್ಮ ಜಿಲ್ಲೆಯ ರೈಲು ಸಂಚರಿಸುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವವೇ ಕಾರಣ ಎಂದಿದ್ದಾರೆ.
60 ವರ್ಷಕ್ಕಿಂತ ಹೆಚ್ಚು ವರ್ಷ ಈ ದೇಶದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಆಗದಿರುವ ಕೆಲಸಗಳು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 7 ವರ್ಷಗಳಲ್ಲಿಯೇ ಆಗಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರೈಲುಗಳು ವಿದ್ಯುತ್ತೀಕರಣಗೊಂಡ ರೈಲ್ವೆ ಲೈನ್ ಮೂಲಕ ಸಂಚರಿಸಲಿದ್ದು, ಇದರಿಂದ ವಾಯು ಮಾಲಿನ್ಯ ಕಡಿಮೆಯಾಗುವುದರ ಜತೆಗೆ ರೈಲ್ವೆ ಇಲಾಖೆಗೆ ಆಗುತ್ತಿದ್ದ ಆರ್ಥಿಕ ನಷ್ಟವನ್ನು ಸರಿ ಹೊಂದಲಿದೆ ಎಂದು ಪ್ರಧಾನಿ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಮಾಜಿ ಸಚಿವ ಪಿಯೂಶ್ ಗೋಯಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.