ಸಾಗರ: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಆರಿದ್ರಾ ಮಳೆ ಬುಧವಾರ ಸಂಜೆಯಿಂದ ಇನ್ನಷ್ಟು ಪ್ರಖರವಾಗಿ ಸುರಿಯುತ್ತಿದ್ದು, ತುಮರಿ ಭಾಗ ಅಕ್ಷರಶಃ ದ್ವೀಪವಾಗಿ ಪರಿಣಮಿಸಿದೆ.
ಹೊಳೆಬಾಗಿಲು ಭಾಗದ ಕಳಸವಳ್ಳಿ ತುಮರಿ ರಸ್ತೆಯಲ್ಲಿ ತಿಮ್ಮಪ್ಪ ಅವರ ಮನೆ ಹತ್ತಿರ ವಿದ್ಯುತ್ ಕಂಬಗಳು ಸಂಪೂರ್ಣ ಬಾಗಿ ರಸ್ತೆಯ ಮೇಲೆಯೇ ವಿದ್ಯುತ್ ತಂತಿಗೂ ಹರಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದಲೇ ತುಮರಿ ಸಿಗಂದೂರು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಕಡೆ ವಿದ್ಯುತ್ ಕಂಬಗಳು ಮುರಿದು ಸಂಪೂರ್ಣ ಪ್ರದೇಶ ಕತ್ತಲಿನಲ್ಲಿದೆ.
ಈ ನಡುವೆ ಮಳೆ ಅಬ್ಬರದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಅಥವಾ ಗುರುವಾರ ಮುಂಜಾನೆ ಶಾಲೆಗಳಿಗೆ ರಜೆ ಘೋಷಿಸುವ ಬದಲು ಬೆಳಿಗ್ಗೆ ಎಂಟೂಮೂವತ್ತರ ವೇಳೆಗೆ ರಜೆ ಕೊಡಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಆದೇಶದ ಕುರಿತಾಗಿ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈವೇಳೆಗೆ ಬಹುಪಾಲು ಮಕ್ಕಳು ಶಾಲಾ ವ್ಯಾನ್‌ಗಳಲ್ಲಿ ಹೊರಟಾಗಿದೆ. ಅದಲ್ಲದೆ ರಜೆಯನ್ನು ಎಸ್‌ಡಿಎಂಸಿ ಜೊತೆ ಮುಖ್ಯ ಶಿಕ್ಷಕರು ಚರ್ಚಿಸಿ ತೀರ್ಮಾನಿಸಬೇಕು ಎಂದು ಹೇಳಲಾಗಿದೆ.
ಇದು ಮತ್ತಷ್ಟು ಗೊಂದಲ, ವಿಳಂಬಕ್ಕೆ ಕಾರಣವಾಗುತ್ತದೆ. ಜವಾಬ್ದಾರಿಯನ್ನು ಹೊತ್ತುಕೊಂಡು ತಾಲೂಕಿನಾದ್ಯಂತ ರಜೆ ಕೊಡುವುದಿದ್ದರೆ ಬಿಇಓ ತೀರ್ಮಾನಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಾಲೂಕಿನ ಬಹುತೇಕ ಶಾಲೆಗಳಲ್ಲಿ ಗುರುವಾರ ರಜೆ ಘೋಷಿಸಿಲ್ಲದಿರುವುದು ಕಂಡುಬಂದಿದೆ.
ಇದನ್ನೂ ಓದಿ: Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ