Advertisement

ಸವಣೂರು-ಕಾಣಿಯೂರು: ಚರಂಡಿಯಲ್ಲೇ  ವಿದ್ಯುತ್‌ ಕಂಬ

11:29 AM Oct 04, 2018 | |

ಬೆಳಂದೂರು: ಸವಣೂರಿನ 33/11 ಕೆ.ವಿ. ವಿದ್ಯುತ್‌ ವಿತರಣ ಕೇಂದ್ರದ 5 ಎಂವಿಎ ಪವರ್‌ ಟ್ರಾನ್ಸ್‌ಫಾರ್ಮರ್‌ ಅನ್ನು ಉನ್ನತೀಕರಿಸುವ ಸಲುವಾಗಿ ಸವಣೂರಿನಿಂದ ಕಾಣಿಯೂರು ಕಡೆಗೆ ಎಚ್‌ಟಿ ವಿದ್ಯುತ್‌ ತಂತಿ (11 ಕೆ.ವಿ.) ಎಳೆಯುವ ನಿಟ್ಟಿನಲ್ಲಿ ಕಂಬಗಳನ್ನು ಅಳವಡಿಸಲಾಗುತ್ತಿದೆ.

Advertisement

ಆಲಂಕಾರು, ಕಾಣಿಯೂರು, ಏಣಿತ್ತಡ್ಕ, ಭಕ್ತಕೋಡಿ ಫೀಡರ್‌ಗಳಿಗೆ ವಿದ್ಯುತ್‌ ಸರಬರಾಜುಗೊಳಿಸಲು ಹೊಸದಾಗಿ ಅಳವಡಿಸುವ ಕಂಬಗಳನ್ನು ಮುಖ್ಯರಸ್ತೆಯ ಚರಂಡಿಗಳಲ್ಲಿ ಹಾಕಲಾಗಿದೆ.

ಹೂಳು ತೆಗೆಯಲೂ ತೊಡಕು
ಸವಣೂರು-ಕಾಣಿಯೂರು ರಾಜ್ಯ ಹೆದ್ದಾರಿಯ ಚರಂಡಿಯಲ್ಲೇ ಕಂಬಗಳನ್ನು ಅಳವಡಿಸಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದಂತಾಗಿದೆ. ಅನೇಕ ಕಡೆ ಸ್ಟಡ್‌ಪೋಲ್‌ (ಸಪೋರ್ಟಿವ್‌ ಕಂಬ) ಗಳನ್ನು ಚರಂಡಿಗೆ ಹಾಕಲಾಗಿದ್ದು, ಇನ್ನು ಮುಂದೆ ಜೆಸಿಬಿಯಲ್ಲಿ ಚರಂಡಿ ಹೂಳು ತೆಗೆಯುವಲ್ಲೂ ತೊಡಕಾಗಿ ಪರಿಣಮಿಸಲಿದೆ.

ಇಲಾಖೆ ಗಮನ ಹರಿಸಲಿ
ಚರಂಡಿ ಬ್ಲಾಕ್‌ ಆದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗುವ ಪರಿಣಾಮ ರಸ್ತೆ ಹದಗೆಡಲು ಇದೂ ಒಂದು ಕಾರಣವಾಗಲಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯೂ ಗಮನ ಹರಿಸುವುದು ಅಗತ್ಯ. ಗುತ್ತಿಗೆದಾರರು ಚರಂಡಿ ಬಿಟ್ಟು ಅಕ್ಕಪಕ್ಕದಲ್ಲಿ ಕಂಬ ಅಳವಡಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.

ನಿರ್ಲಕ್ಷ್ಯ ಬೇಡ
ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿ ರಸ್ತೆ ಕೆಡದಂತೆ ಜವಾಬ್ದಾರಿ ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ  ಹೊಂದಬಾರದು. ಗುತ್ತಿಗೆದಾರರು ಚರಂಡಿಗೆ ಕಂಬ ಅಳವಡಿಸಿ ನೀರು ಹರಿಯಲು ತೊಡಕಾಗುವಂತೆ ಮಾಡಿರುವುದು ಸರಿಯಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಚರಂಡಿ ಹೂಳು ತೆಗೆಯಲೂ ಸಾಧ್ಯವಾಗದು.
ಕರುಣಾಕರ ಪೂಜಾರಿ ಪಟ್ಟೆ,
  ಉಪಾಧ್ಯಕ್ಷರು, ಪ್ರಾ.ಕೃ.ಸ.ಸ. ಸಂಘ, ಸವಣೂರು

Advertisement

ಮೇಲಧಿಕಾರಿಗಳ ಗಮನಕ್ಕೆ ತರುವೆ 
ಸವಣೂರಿನಿಂದ ಹೊಸದಾಗಿ ಕಾಣಿಯೂರು, ಆಲಂಕಾರು ಫೀಡರ್‌ಗಳಿಗೆ ಎಚ್‌ಟಿ ಲೈನ್‌ ಎಳೆಯಲಾಗುತ್ತಿದೆ. ಕೆಲವೊಂದು ಕಡೆ ಗುತ್ತಿಗೆದಾರರು ಚರಂಡಿಗೆ ಕಂಬ ಅಳವಡಿಸಿದ್ದಾರೆ. ಕಂಬವನ್ನು ಚರಂಡಿಯಲ್ಲಿ ಅಳವಡಿಸದಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ಕುರಿತು ಮೇಲಧಿಕಾರಿಯವರ ಗಮನಕ್ಕೂ ತರಲಿದ್ದೇನೆ.
– ನಾಗರಾಜ್‌ ಕೆ.,
ಜೆಇ, ಸವಣೂರು ಮೆಸ್ಕಾಂ

Advertisement

Udayavani is now on Telegram. Click here to join our channel and stay updated with the latest news.

Next