Advertisement
ಈಚೆಗೆ ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಆದ ಹಾನಿ ಎಲ್ಲರಿಗೂ ತಿಳಿದಿರುವಂಥದ್ದೇ. ಎಲ್ಲೇಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದು ನಾನಿರುವ ಚೆಂಬು ಗ್ರಾಮವೂ ಸೇರಿದಂತೆ ನೂರಾರು ಗ್ರಾಮಗಳು ಕತ್ತಲಲ್ಲಿ ಮುಳುಗಿಬಿಟ್ಟವು. ಊರಿಗೆ ಊರೇ ಹಳೇ ಕಾಲಕ್ಕೆ ಹಿಂದಿರುಗಿತು. ಆಗಾಗ ರಿಂಗಣಿಸುವ ಮೊಬೈಲ್‌ಗಳು ಸ್ತಬ್ಧ. ಮಿಕ್ಸಿ- ಗೆùಂಡರ್‌ಗಳಿಗೂ ವಿಶ್ರಾಂತಿ. ಸಂತ್ರಸ್ತರಲ್ಲದ ಹೆಣ್ಣುಮಕ್ಕಳು ಒಂದು ದಿನ ಉಪ್ಪಿಟ್ಟು ಮಾಡಿದರು. ಮರುದಿನ ಚಿತ್ರಾನ್ನ ಮಾಡಿದರು. ಊಟಕ್ಕೆ ಬೇಳೆ ಸಾರು ಮಾಡಿದರು. ಎಷ್ಟು ದಿನ ಅಂತ ಇವುಗಳನ್ನೇ ಮಾಡುವುದು? ದೋಸೆ, ಇಡ್ಲಿ, ತೆಂಗಿನಕಾಯಿ ಹಾಕಿ ಸಾಂಬಾರ್ ಮಾಡಬೇಕಾದರೆ ರುಬ್ಬಲೇ ಬೇಕು. ಈಗ ಎಲ್ಲರ ಮನೆಯ ಮೂಲೆಯಲ್ಲಿದ್ದ ಕಡೆಯುವ ಕಲ್ಲುಗಳೂ ಹೊರಬಂತು. ಆಧುನಿಕ ಸ್ತ್ರೀಯರೂ ರುಬ್ಬುವ ಕಲ್ಲಿಗೆ ಶರಣಾಗದೆ ಬೇರೆ ದಾರಿ ಇರಲಿಲ್ಲ. ಪರಿಸ್ಥಿತಿ ಹೀಗಿದ್ದರೂ, ವಿದ್ಯುತ್ ಕಂಬ ಧರಾಶಾಯಿಯಾಗಿದ್ದರೂ ನನ್ನ ಮನೆಯಲ್ಲಿ ಮಾತ್ರ ವಿದ್ಯುದ್ದೀಪ ಇರುಳೂ, ಹಗಲೂ ಉರಿಯುತ್ತಿತ್ತು. ಮಿಕ್ಸಿ ಓಡುತ್ತಿತ್ತು. ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವೇ? ಹೇಳುತ್ತೇನೆ ಕೇಳಿ.
ನನಗೆ ಆಗ ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ. ಏಳು- ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ, ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. ಇದರಿಂದ ನನಗೆ ಬಿಡುಗಡೆ ಯಾವಾಗ? ಎಲ್ಲರ ಮನೆಯಲ್ಲಿ ಇರುವಂತೆ ನನ್ನ ಮನೆಯಲ್ಲೂ ಕರೆಂಟ್ ಇರುತ್ತಿದ್ದರೆ… ಎಂದು ಅನಿಸಿ ದುಃಖವೆನಿಸುತ್ತಿತ್ತು. ನಮ್ಮ ಊರಿಗೆ ಸುಮಾರು ಐದು ಕಿ.ಮೀ. ದೂರದಿಂದ ವಿದ್ಯುತ್ ಕಂಬಗಳನ್ನು ನೆಟ್ಟು ಲೈನ್ ಎಳೆಯಬೇಕಿತ್ತು. ದಟ್ಟ ಅರಣ್ಯ ಪ್ರದೇಶದಲ್ಲಿ ನಮ್ಮ ಊರು ಇರುವುದರಿಂದಲೋ ಏನೋ ನಾವು ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಸರ್ಕಾರ ನಮಗೆ ವಿದ್ಯುತ್ಛಕ್ತಿ ಒದಗಿಸಲಿಲ್ಲ. ಇದಕ್ಕೆ ಪರ್ಯಾಯ ಏನು ಎಂದು ನಾನು ಚಿಂತಿಸತೊಡಗಿದೆ.
Related Articles
Advertisement
ಸುಮಾರು 40 ಮೀಟರ್ ಎತ್ತರದಿಂದ ಬೀಳುವ ನೀರನ್ನು 500 ಮೀಟರ್ ಉದ್ದದ ಎರಡೂವರೆ ಇಂಚಿನ ಪಿವಿಸಿ ಪೈಪ್ ಮೂಲಕ ಜಲವಿದ್ಯುತ್ ಘಟಕಕ್ಕೆ ಹರಿಸಿದ್ದೇವೆ. ಆಗ ಮೋಟಾರು ತಿರುಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರ ಸಾಮರ್ಥ್ಯ ಒಂದು ಕಿಲೋವ್ಯಾಟ. ಹೀಗೆ ಉತ್ಪಾದನೆ ಆದ ವಿದ್ಯುತ್ ಅನ್ನು 60 ಮೀಟರ್ ಉದ್ದದ ಎರಡು ಕೇಬಲ್‌ಗಳ ಮೂಲಕ ಅಡಕೆ ತೋಟದ ನಡುವೆ ಸಾಗಿಸಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ. 2010ರಲ್ಲಿ ಇದಕ್ಕೆ ಆದ ಖರ್ಚು 1.10 ಲಕ್ಷ ರೂಪಾಯಿ. ಇದರ ಮುಕ್ಕಾಲು ಭಾಗ ಹಣವನ್ನು ಕೇಂದ್ರ ಸರ್ಕಾರ ಭರಿಸಿದೆ. ಈಗ ಈ ಸ್ವಂತ ವಿದ್ಯುತ್‌ನಿಂದಲೇ ನಮ್ಮ ಮನೆಯ ಲೈಟ್, ಫ್ರಿಡ್ಜ್, ಟೀವಿ, ಮಿಕ್ಸಿ, ಫ್ಯಾನ್, ಮೊಬೈಲ್ ಚಾರ್ಜರ್, ಇಸಿŒ ಪೆಟ್ಟಿಗೆ ನಡೆಯುತ್ತದೆ.
2014ರಲ್ಲಿ ಸರ್ಕಾರದ ಕರೆಂಟೂ ಬಂತು. ಆದರೇನು? ಮಳೆಗಾಲದಲ್ಲಿ ನಮ್ಮೂರಲ್ಲಿ ಮರ ಮತ್ತು ಅದರ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಆಗಾಗ ಬೀಳುತ್ತಲೇ ಇರುವುದರಿಂದ ಸರ್ಕಾರದ ಕರೆಂಟ್ ಕೈಕೊಡುವುದೇ ಹೆಚ್ಚು. ಬೇಸಿಗೆಯನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ನಮ್ಮದೇ ನೀರಿನಿಂದ ಉತ್ಪಾದಿಸುವ ಕರೆಂಟ್ ನಮ್ಮ ಮನೆಯನ್ನು ಬೆಳಗುತ್ತದೆ. ಅದೂ ಯಾವುದೇ ಖರ್ಚಿಲ್ಲದೆ! ಆಗೆÇÉಾ ಸರ್ಕಾರಕ್ಕೆ ಮಿನಿಮಮ್ ಬಿಲ್ ಕಟ್ಟುತ್ತೇವೆ.
ಮಲೆನಾಡು ಹಾಗೂ ಕರಾವಳಿಯಲ್ಲಿ ಗುಡ್ಡದಿಂದ ಹರಿದು ಬರುವ ತೊರೆಗಳು ಸಾಕಷ್ಟಿವೆ. ಸರಕಾರ ಕಿರುಜಲವಿದ್ಯುತ್ ಘಟಕಕ್ಕೆ ಸಬ್ಸಿಡಿ ಕೊಡುವುದರಿಂದ ಹರಿಯುವ ನೀರು ಹೊಂದಿರುವ ರೈತರು ಈ ಘಟಕ ಸ್ಥಾಪಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬಹುದು.
ಮರ ಕಡಿಯಬೇಕಿಲ್ಲ…ಇದು ಪರಿಸರಸ್ನೇಹಿ ವಿದ್ಯುತ್. ಈ ಘಟಕ ಸ್ಥಾಪಿಸಲು ಮರ ಕಡಿಯಬೇಕಾಗಿಲ್ಲ. ಹರಿದು ಹೊರ ಹೋಗುವ ನೀರನ್ನು ಬಳಸುವುದರಿಂದ ನೀರಿನ ಅಪವ್ಯಯ ಇಲ್ಲ. ಜಲವಿದ್ಯುತ್ ಘಟಕಕ್ಕೆ ಹರಿಸಿದ ನೀರೂ ವ್ಯರ್ಥವಾಗುವುದಿಲ್ಲ. ಅದನ್ನು ತೋಟಕ್ಕೆ, ಗದ್ದೆಗೆ ಬಳಸಬಹುದು. ತಿಂಗಳು ತಿಂಗಳು ಬಿಲ್ ಕಟ್ಟಲು ಇಲ್ಲ. ನಿರ್ವಹಣೆ ಅಂತ ಏನೂ ಇರುವುದಿಲ್ಲ. ಆದರೆ, ಜೋರು ಮಳೆ ಬರುವಾಗ ಪೈಪ್‌ನ ಫಿಲ್ಟರ್‌ನಲ್ಲಿ ಕಸಕಡ್ಡಿ ನಿಲ್ಲುತ್ತದೆ. ಅದನ್ನು ತೆಗೆಯಬೇಕು. ಫೆಬ್ರವರಿಯಿಂದ ಮೇ ತನಕ ಜಲಪಾತ ಬತ್ತುವುದರಿಂದ ಈ ಸಮಯದಲ್ಲಿ ನಮಗೆ ನೀರಿನ ಕರೆಂಟ್ ಇರುವುದಿಲ್ಲ. ಸಹನಾ ಕಾಂತಬೈಲು