Advertisement

ಮಾರ್ಚ್‌ ವೇಳೆಗೆ ರಾಜಧಾನಿ ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಬಸ್‌

12:48 PM Jan 03, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ರೂಪಿಸಿರುವ “ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ’ ಮಾರ್ಚ್‌ ಮೊದಲ ವಾರದ ವೇಳೆಗೆ ಪ್ರಾರಂಭವಾಗಲಿದೆ. ಬಿಎಂಟಿಸಿಗೆ 150 ಎಲೆಕ್ಟ್ರಿಕ್‌ ಬಸ್‌ಗಳ ಸೇರ್ಪಡೆ ಸಂಬಂಧ ಜಾಗತಿಕ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಫೆಬ್ರವರಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ತಯಾರಿಕೆಗೆ ಒಪ್ಪಂದ ಹಾಗೂ ಮಾರ್ಚ್‌ ವೇಳೆಗೆ ಬಸ್‌ಗಳು ರಸ್ತೆಗಿಳಿಯಲಿವೆ.

Advertisement

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ಎಲೆಕ್ಟ್ರಿಕ್‌ ಬಸ್‌ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡುವುದಿಲ್ಲ. ಬದಲಿಗೆ ಎಲೆಕ್ಟ್ರಿಕ್‌ ಬಸ್‌ ತಯಾರಿಕಾ ಕಂಪನಿಗಳ ಜತೆಯೇ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಹೇಳಿದರು. 1.80 ಕೋಟಿ ರೂ. ಮೊತ್ತದ ಎಲೆಕ್ಟ್ರಿಕ್‌ ಬಸ್‌ಗೆ ಕೇಂದ್ರ ಸರ್ಕಾರದ ಸಬ್ಸಿಡಿಯೂ ದೊರೆಯಲಿದೆ.

ಎಲೆಕ್ಟ್ರಿಕ್‌ ಬಸ್‌ ತಯಾರಿಕೆ ಕಂಪನಿಗಳೇ ಬಸ್‌ ಹಾಗೂ ಚಾಲಕನನ್ನು ನೀಡಿ ಬಸ್‌ ನಿರ್ವಹಣೆ ಮಾಡಲಿದೆ. ಬಿಎಂಟಿಸಿ ವತಿಯಿಂದ ನಿರ್ವಾಹಕ ಮಾತ್ರ ಇರಲಿದ್ದು ಲಾಭಾಂಶದಲ್ಲಿ ಖಾಸಗಿ ಸಂಸ್ಥೆಗಳಿಗೆ ಪಾಲು ನೀಡಲಾಗುವುದು ಎಂದು ತಿಳಿಸಿದರು. ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಪ್ರಯಾಣ ದರ ಬಿಎಂಟಿಸಿಯೇ ನಿರ್ಧಾರ ಮಾಡಲಿದೆ. ಈಗಿರುವ ಬಸ್‌ಗಳಿಗಿಂತ ಕಡಿಮೆ ಅಥವಾ ಅಷ್ಟೇ ದರ ನಿಗದಿ ಮಾಡಲಾಗುವುದು ಎಂದು ಹೇಳಿದರು.

ಎಲೆಕ್ಟ್ರಿಕ್‌ ಬಸ್‌ಗಳ ಬ್ಯಾಟರಿ 200 ಕಿ.ಮೀ. ಸಂಚಾರದ ಸಾಮರ್ಥ್ಯ ಹೊಂದಿದ್ದು, 200 ಕಿ.ಮೀ. ಕ್ರಮಿಸಿದ ನಂತರ ಮತ್ತೆ ಚಾರ್ಜ್‌ ಮಾಡಬೇಕಾಗುತ್ತದೆ. ಹೀಗಾಗಿ, ತಕ್ಷಣಕ್ಕೆ ಬಿಎಂಟಿಸಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ನಂತರ ಕೆಎಸ್‌ಆರ್‌ಟಿಸಿಗೂ ವಿಸ್ತರಿಸಿ ಬೆಂಗಳೂರು-ಕೋಲಾರ, ತುಮಕೂರು-ಬೆಂಗಳೂರು ನಡುವೆ ಸಂಚಾರಕ್ಕೂ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ಅರಸು ಟ್ರಕ್‌ ಟರ್ಮಿನಲ್‌ ಅಭಿವೃದ್ಧಿ: ನಗರದ ಯಶವಂತಪುರ ಬಳಿಯ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲಿ 80 ಲೋಡ್‌ ತ್ಯಾಜ್ಯ, ವಾರಸುದಾರರಿಲ್ಲದ ಹತ್ತಾರು ವಾಹನಗಳು ಇದ್ದವು. ಅವೆಲ್ಲ ತೆರವುಗೊಳಿಸಲಾಗುತ್ತಿದೆ.

Advertisement

ನೆಲಮಂಗಲದಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣ ಪೂರ್ಣ ಪ್ರಮಾಣದ ಬಳಕೆಗೆ ಬಿಎಂಟಿಸಿ, ಮೆಟ್ರೋ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಖಾಸಗಿ ಬಸ್‌ ಮಾಲೀಕರ ಜತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ನಿಯಂತ್ರಣ: ನಗರದಲ್ಲಿ ಮಾಲಿನ್ಯ ಪ್ರಮಾಣ ತೀವ್ರವಾಗಿದ್ದು ಇತ್ತೀಚೆಗೆ ಒಂದು ಬಿಎಂಟಿಸಿ ಬಸ್‌ನಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆ ವೇಳೆಗೆ 2 ಕೆಜಿ ಧೂಳು ಸಂಗ್ರಹವಾಗಿತ್ತು. ನಗರದಲ್ಲಿ ಕಟ್ಟಡ ಕಾಮಗಾರಿ , ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಧೂಳು ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫೆ. ತಿಂಗಳಲ್ಲಿ ಟ್ರಾಫಿಕ್‌ ಲೆಸ್‌ ಡೇ: ಬೆಂಗಳೂರಿನಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರ ಟ್ರಾಫಿಕ್‌ ಲೆಸ್‌ ಡೇ ಆಚರಿಸಲು ತೀರ್ಮಾನಿಸಲಾಗಿದೆ. ಇದು ಫೆ. 2 ನೇ ವಾರದಿಂದ ಪ್ರಾರಂಭವಾಗಲಿದೆ. ಈಗಾಗಲೇ ಹಲವಾರು ಸಂಘ-ಸಂಸ್ಥೆಗಳು, ನಾಗರಿಕ ಸಂಘಟನೆಗಳ ಜತೆ ಮಾತನಾಡಿ ಮನವಿ ಮಾಡಿದ್ದೇನೆ. ಐಟಿ-ಬಿಟಿ ವಲಯದ ಜತೆಯೂ ಚರ್ಚೆ ನಡೆಸಲಾಗುವುದು. ಆ ದಿನ ಖಾಸಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು ಬಿಎಂಟಿಸಿ, ಮೆಟ್ರೋ ಸೇರಿ ಸಮೂಹ ಸಾರಿಗೆಯಲ್ಲಿ ಪ್ರಯಾಣಿಸಬೇಕು. ಬಸ್‌ ಹಾಗೂ ಮೆಟ್ರೋ ಪಾಸ್‌ ದರ ಸಹ ಆ ದಿನ ಕಡಿಮೆ ಮಾಡಲಾಗುವುದು. ನಗರದಲ್ಲಿ ಪ್ರತಿದಿನ 72 ಲಕ್ಷ ವಾಹನಗಳು ಸಂಚರಿಸುತ್ತಿದ್ದು ಆ ಪೈಕಿ 56 ಲಕ್ಷ ವಾಹನಗಳು ಖಾಸಗಿ ವಾಹನಗಳಾಗಿವೆ.
-ಎಚ್‌.ಎಂ.ರೇವಣ್ಣ, ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next