Advertisement

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ

11:27 PM May 17, 2024 | Team Udayavani |

ಬೆಂಗಳೂರು: ಚುನಾವಣಾ ವ್ಯವಸ್ಥೆಯನ್ನು ಹಾದಿತಪ್ಪಿಸುವ ಹಾಗೂ ಮತದಾನದ ಮೌಲ್ಯವನ್ನು ಕುಲಗೆಡಿಸುವ ಚುನಾವಣಾ ಅಕ್ರಮಗಳಿಗೆ ಲಂಗು-ಲಗಾಮು ಇಲ್ಲ ಎಂಬುದು ಈ ಬಾರಿಯ ಲೋಕಸಭೆ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ.

Advertisement

ದೇಶದ ಬಹುತೇಕ ರಾಜ್ಯಗಳಲ್ಲಿ ಈವರೆಗೆ ನಾಲ್ಕು ಹಂತದ ಮತದಾನ ಮುಗಿದಿದ್ದು, ಇನ್ನೂ ಮೂರು ಹಂತದ ಮತದಾನ ಬಾಕಿ ಇದೆ. ದಕ್ಷಿಣದ ಎಲ್ಲ ಐದು ರಾಜ್ಯಗಳಲ್ಲಿ ಮತದಾನ ಮುಕ್ತಾಯಗೊಂಡಿದೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದಕ್ಷಿಣದ ರಾಜ್ಯಗಳ ತುಲನೆ ಮಾಡಿದರೆ ತಮಿಳುನಾಡು ಒಂದನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಚುನಾವಣಾ ಅಕ್ರಮ ಹೆಚ್ಚಾಗಿರುವುದು ಹೆಗ್ಗಳಿಕೆಯಂತೂ ಅಲ್ಲ, ಚುನಾವಣಾ ಆಯೋಗದ ಬಿಗಿ ಕ್ರಮಗಳಿಂದಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಕ್ರಮಗಳಿಗೆ ಕಡಿವಾಣ ಬಿದಿದ್ದೆ ಅನ್ನುವುದು ಸಮಾಧಾನದ ಸಂಗತಿ.

ಚುನಾವಣಾ ಆಯೋಗದ ಅಂಕಿ-ಅಂಶ ಪ್ರಕಾರ ತಮಿಳುನಾಡಿನಲ್ಲಿ ಚುನಾವಣಾ ಅಕ್ರಮಗಳ ಜಪ್ತಿ ಮೊತ್ತ ಸಾವಿರ ಕೋಟಿ ದಾಟಿದ್ದು ಅದು ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 558 ಕೋಟಿ ರೂ. ಚುನಾವಣಾ ಅಕ್ರಮ ಜಪ್ತಿಯಾಗಿದ್ದು, ಎರಡನೇ ಸ್ಥಾನದಲ್ಲಿದೆ. ಉಳಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳ ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ತೆಲಂಗಾಣದಲ್ಲಿ ಅಂದಾಜು 191 ಕೋಟಿ, ಆಂಧ್ರಪ್ರದೇಶದಲ್ಲಿ 141 ಕೋಟಿ, ಕೇರಳದಲ್ಲಿ 54 ಕೋಟಿ ರೂ. ಮೊತ್ತದಷ್ಟು ಚುನಾವಣಾ ಅಕ್ರಮ ಜಪ್ತಿ ಮಾಡಲಾಗಿದೆ.

2019 ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಚುನಾವಣಾ ಅಕ್ರಮ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದರೆ ಕರ್ನಾಟಕದಲ್ಲಿ “ಬೆಟ್ಟದಾಕಾರದಷ್ಟು’ ಚುನಾವಣಾ ಅಕ್ರಮ ಜಪ್ತಿ ದಾಖಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 952 ಕೋಟಿ ರೂ. ಚುನಾವಣಾ ಅಕ್ರಮ ಜಪ್ತಿ ನಡೆದಿದ್ದರೆ, ಈ ಬಾರಿ 1,300 ಕೋಟಿ ರೂ. ಆಗಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಕೇವಲ 88 ಕೋಟಿ ರೂ. ಚುನಾವಣಾ ಅಕ್ರಮ ಜಪ್ತಿ ಮಾಡಿದ್ದರೆ ಈ ಬಾರಿ ಬರೋಬ್ಬರಿ 558 ಕೋಟಿ ರೂ. ಜಪ್ತಿ ಮಾಡಲಾಗಿದೆ. ಇದು ರಾಜ್ಯದ ಲೋಕಸಭೆ ಚುನಾವಣೆಗಳ ಇತಿಹಾಸದಲ್ಲಿ ದಾಖಲೆಯಾಗಿದೆ. ಅದೇ ರೀತಿ ತೆಲಂಗಾಣದಲ್ಲಿ ಕಳೆದ ಬಾರಿ 84 ಕೋಟಿ ರೂ. ಚುನಾವಣಾ ಅಕ್ರಮ ಜಪ್ತಿ ಮಾಡಿದ್ದರೆ, ಈ ಬಾರಿ 191 ಕೋಟಿ ರೂ. ಆಗಿದೆ. ಇದಕ್ಕೆ ತದ್ವಿರುದ್ಧವಾಗಿ ಆಂಧ್ರಪ್ರದೇಶದಲ್ಲಿ ಕಳೆದ ಬಾರಿ 232 ಕೋಟಿ ರೂ. ಚುನಾವಣಾ ಅಕ್ರಮ ಜಪ್ತಿ ಮಾಡಿದ್ದರೆ, ಈ ಬಾರಿ 141 ಕೋಟಿ ಆಗಿದ್ದು, ಆರ್ಧದಷ್ಟು ಕಡಿಮೆ ಆಗಿದೆ. ಕೇರಳದಲ್ಲಿ 2019ರಲ್ಲಿ ಚುನಾವಣಾ ಅಕ್ರಮ ಜಪ್ತಿ ಮೊತ್ತ 40 ಕೋಟಿ ಇದ್ದರೆ, ಈ ಬಾರಿ 53 ಕೋಟಿ ರೂ. ಆಗಿದೆ.

ಚುನಾವಣಾ ಅಕ್ರಮಗಳಲ್ಲಿ ನಗದು ಹಣ, ಅಕ್ರಮ ಮದ್ಯ ಹಾಗೂ ಉಚಿತ ಉಡುಗೊರೆಗಳು ಮೇಲುಗೈ ಸಾಧಿಸಿವೆ. ಒಂದು ರಾಜ್ಯದಲ್ಲಿ ನಗದು ಜಪ್ತಿ ಹೆಚ್ಚಾಗಿದ್ದರೆ, ಮೊತ್ತೂಂದು ರಾಜ್ಯದಲ್ಲಿ ಅಕ್ರಮ ಮದ್ಯದ ಭರಾಟೆ ಹೆಚ್ಚಾಗಿತ್ತು. ಉಳಿದಂತೆ, ಮಾದಕ ಪದಾರ್ಥಗಳು, ಚಿನ್ನಾಭರಣ ಸದ್ದು ಮಾಡಿದೆ.

Advertisement

ತಮಿಳುನಾಡಿನಲ್ಲಿ ಅತಿ ಹೆಚ್ಚು 1,084 ಕೋಟಿ ಮೊತ್ತದ ಆಮೂಲ್ಯ ವಸ್ತುಗಳು ಜಪ್ತಿ ಆಗಿದ್ದರೆ, ಕರ್ನಾಟಕದಲ್ಲಿ 180 ಕೋಟಿ ರೂ. ಮೊತ್ತದ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next