ನಾಗಪುರ: ಚುನಾವಣ ಬಾಂಡ್‌ಗಳು ಒಂದು “ಪ್ರಯೋಗ” ಮತ್ತು ಅದು ಎಷ್ಟು ಪ್ರಯೋಜನಕಾರಿ ಮತ್ತು ಪರಿಣಾಮಕಾರಿಯಾಗಿದೆ ಎಂಬುದನ್ನು ಸಮಯ ಹೇಳುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾನುವಾರ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಭಾನುವಾರ ಮೂರು ವರ್ಷಗಳ ಕಾಲ ‘ಸಹ ಕಾರ್ಯವಾಹ’ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ಅವರನ್ನು ಮರು ಆಯ್ಕೆ ಮಾಡಿದೆ. ಹೊಸಬಾಳೆ ಅವರು 2021 ರಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಚುನಾವಣ ಬಾಂಡ್‌ಗಳು “ಪ್ರಯೋಗ” ಆಗಿರುವುದರಿಂದ ಸಂಘವು ಅದರ ಬಗ್ಗೆ ಇನ್ನೂ ಚರ್ಚಿಸಿಲ್ಲ. ಇದನ್ನು ಚೆಕ್ ಮತ್ತು ಬ್ಯಾಲೆನ್ಸ್ ನೊಂದಿಗೆ ಮಾಡಲಾಗಿದೆ. ಚುನಾವಣ ಬಾಂಡ್‌ಗಳನ್ನು ಇದ್ದಕ್ಕಿದ್ದಂತೆ ಪರಿಚಯಿಸಲಾಗಿಲ್ಲ, ಇಂತಹ ಯೋಜನೆ ಮೊದಲೇ ತರಲಾಗಿದೆ. ಬದಲಾವಣೆಯನ್ನು ಪರಿಚಯಿಸಿದಾಗ, ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಇವಿಎಂಗಳನ್ನು ಪರಿಚಯಿಸಿದಾಗಲೂ ಇಂತಹ ಪ್ರಶ್ನೆಗಳು ಉದ್ಭವಿಸಿದವು” ಎಂದು ಹೇಳಿದ್ದಾರೆ.
ಚುನಾವಣ ಆಯೋಗವು ಗುರುವಾರ ಚುನಾವಣ ಬಾಂಡ್‌ಗಳ ಡೇಟಾವನ್ನು ಬಿಡುಗಡೆ ಮಾಡಿದ್ದು, ಹಲವಾರು ಬಿಲಿಯನೇರ್ ಉದ್ಯಮಿಗಳು ಮತ್ತು ಹಲವು ಕಂಪೆನಿಗಳು ಖರೀದಿದಾರರ ಪಟ್ಟಿಯಲ್ಲಿವೆ.
ಈಗ ರದ್ದಾದ ಚುನಾವಣ ಬಾಂಡ್‌ಗಳ ಖರೀದಿದಾರರಲ್ಲಿ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರಿಂದ ಹಿಡಿದು ಬಿಲಿಯನೇರ್ ಸುನಿಲ್ ಭಾರತಿ ಮಿತ್ತಲ್ ಅವರ ಏರ್‌ಟೆಲ್, ಅನಿಲ್ ಅಗರ್ವಾಲ್‌ರ ವೇದಾಂತ,ಐಟಿಸಿ, ಮಹೀಂದ್ರಾ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳು ಸೇರಿ ಪ್ರಮುಖರು ಸೇರಿದ್ದಾರೆ.
ಲೋಕಸಭೆ ಚುನಾವಣೆ ಮುನ್ನ ರೈತರ ಆಂದೋಲನದ ನೆಪದಲ್ಲಿ ಅರಾಜಕತೆ ಹರಡಿಸುವ ಪ್ರಯತ್ನಗಳನ್ನು ಪುನರಾರಂಭಿಸಲಾಗಿದೆ ಎಂದು ಆರ್‌ಎಸ್‌ಎಸ್ ಶನಿವಾರ ಆರೋಪಿಸಿತ್ತು. ಪಂಜಾಬ್‌ನಲ್ಲಿ ಪ್ರತ್ಯೇಕವಾದಿ ಚಟುವಟಿಕೆಗಳು ಚಿಗುರಿದೆ. ಪಶ್ಚಿಮಬಂಗಾಲದ ಸಂದೇಶ್‌ಖಾಲಿಯಲ್ಲಿ ತಾಯಂದಿರು, ಸಹೋದರಿಯರ ಮೇಲೆ ನಡೆದ ದೌರ್ಜನ್ಯಗಳು ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ಹೇಳಿತ್ತು.