ನವದೆಹಲಿ: ಚುನಾವಣಾ ಬಾಂಡ್ ಗಳ ಮೂಲಕ ಪಡೆದ ದೇಣಿಗೆಯನ್ನು ಹಫ್ತಾ ವಸೂಲಿ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 1,600 ಕೋಟಿ ರೂ. ದೇಣಿಗೆಯ ಮೂಲದ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ:Hawala Money: ಎರಡು ತಿಂಗಳಲ್ಲಿ ಕೇರಳಕ್ಕೆ 264 ಕೋ.ರೂ. ಹವಾಲಾ ಹಣ
ಬಾಂಡ್ ಗಳ ಮೂಲಕ ಪಡೆದ ದೇಣಿಗೆಯನ್ನು ಹಫ್ತಾ ವಸೂಲಿ ಎಂದಿರುವ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾ, ರಾಹುಲ್ ಗಾಂಧಿ ಪಕ್ಷ ಕೂಡಾ 1,600 ಕೋಟಿ ರೂ. ದೇಣಿಗೆ ಪಡೆದಿದೆ. ಹಾಗಾದರೆ ಗಾಂಧಿ ಆ ದೇಣಿಗೆಯನ್ನು ಹಫ್ತಾ ವಸೂಲಿ ಮೂಲಕ ಪಡೆದಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು.
ನಾವು ಅದನ್ನು ಪಾರದರ್ಶಕವಾಗಿ ಪಡೆದ ದೇಣಿಗೆಯಾಗಿದೆ. ಆದರೆ ಒಂದು ವೇಳೆ ವಸೂಲಿ ಎಂದು ಹಣೆಪಟ್ಟಿ ಹಚ್ಚುವುದಾದರೆ, ರಾಹುಲ್ ಗಾಂಧಿ ಪೂರ್ಣ ವಿವರವನ್ನು ನೀಡಬೇಕು ಎಂದು ಶಾ ತಮ್ಮ ಎಕ್ಸ್ ಖಾತೆಯಲ್ಲಿ ಕಟುವಾಗಿ ಉಲ್ಲೇಖಿಸಿದ್ದಾರೆ.
ನಾನು ನಿಮಗೆ ಭರವಸೆ ನೀಡುತ್ತೇನೆ, ಒಂದು ಬಾರಿ ದೇಣಿಗೆಯ ವಿವರಗಳು ಹೊರಬಂದ ನಂತರ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಸಾರ್ವಜನಿಕವಾಗಿ ಎದುರಿಸಲು ಕಷ್ಟವಾಗಲಿದೆ ಎಂದು ಅಮಿತ್ ಶಾ ಎಚ್ಚರಿಸಿದ್ದಾರೆ.
ಭಾರತೀಯ ರಾಜಕಾರಣದಲ್ಲಿನ ಕಪ್ಪು ಹಣದ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಯೋಜನೆಯನ್ನು ರದ್ದುಪಡಿಸಿದ್ದು, ಮತ್ತೆ ಕಪ್ಪು ಹಣ ಚಲಾವಣೆಯಾಗಲಿದೆ ಎಂಬುದು ನನ್ನ ಭಯವಾಗಿದೆ ಎಂದು ಶಾ ತಿಳಿಸಿದ್ದಾರೆ.