ಮೈಸೂರು: ಮುಂಬರುವ ಲೋಕಸಭಾ ಚುನಾವಣೆಗೆ ಐದು ವರ್ಷಗಳಲ್ಲಿ ನಾವು ಮಾಡಿರುವ ಸಾಧನೆಗಳ ಮೇಲೆಯೇ ಚುನಾವಣೆಗೆ ಹೋಗುತ್ತೇವೆ. ಯಾವುದೇ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶನಿವಾರ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಂದ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರದಲ್ಲಿ 48 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಕೊಟ್ಟಿದ್ದೇನು?, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 48 ತಿಂಗಳಲ್ಲಿ ದೇಶಕ್ಕೆ ಕೊಟ್ಟಿರುವುದೇನು ಎಂಬುದನ್ನು ಈ ಕಿರುಹೊತ್ತಿಗೆಯಲ್ಲಿ ಹೋಲಿಕೆ ಮಾಡಿ ತಿಳಿಸಿದ್ದೇವೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದನಾಗಿ ಮೈಸೂರು ಅಭಿವೃದ್ಧಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ನಾಲ್ಕು ಪುಟದ ಕರಪತ್ರದಲ್ಲಿ ಹೇಳಲಾಗಿದೆ. ಇದನ್ನು ಜನರಿಗೆ ತಲುಪಿಸುವ ಮೂಲಕ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ಪ್ರಚಾರ ಆರಂಭಿಸುತ್ತಿದ್ದೇವೆ ಎಂದರು. ಈ ವೇಳೆ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.
ಬಳಿಕ ಮೈಸೂರು ಅರಮನೆಗೆ ತೆರಳಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಯ ವಿವರಗಳುಳ್ಳ ಕಿರು ಹೊತ್ತಿಗೆ ಹಾಗೂ ಮೈಸೂರು-ಕೊಡಗು ಲೋಕಸಭಾ ಕೇತ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತ ಕರಪತ್ರವನ್ನು ನೀಡಿದರು.
ಯೋಗ ಸಿದ್ಧತೆ ಪರಿಶೀಲನೆ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನದ ಸಿದ್ಧತೆಗಳ ಬಗ್ಗೆ ರೇಸ್‌ಕೋರ್ಸ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಕಳೆದ ಬಾರಿ ಮೈಸೂರಿನ ಯೋಗ ಪಟುಗಳು ಹಾಗೂ ಮೈಸೂರಿನ ಜನತೆ ಅತ್ಯುತ್ಸಾಹದಿಂದ 55 ಸಾವಿರಕ್ಕಿಂತ ಹೆಚ್ಚು ಜನರು ಭಾಗಿಯಾಗಿದ್ದರಿಂದ ಗಿನ್ನಿಸ್ ದಾಖಲೆ ಬರೆಯಲು ಸಾಧ್ಯವಾಯಿತು. ಈ ಬಾರಿ 70 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಮತ್ತೂಮ್ಮೆ ಗಿನ್ನಿಸ್ ದಾಖಲೆ ಮಾಡಲು ಜನರ ಸಹಕಾರ ಬೇಕು. ಮೈಸೂರಿನ ಪ್ರತಿಯೊಬ್ಬರು ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.