ಬೆಂಗಳೂರು: ಮುಂದಿನ ವರ್ಷದ ಜೂನ್ ತಿಂಗಳಲ್ಲಿ ವಿಧಾನ ಪರಿಷತ್ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ತಲಾ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಗೊಂದಲ ಮುಂದುವರಿದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತ ಚರ್ಚೆ ಮುಂದೂಡಲಾಗಿದೆ.
ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಮತ್ತು ಯಾರ ಬಗ್ಗೆಯೂ ಒಮ್ಮತ ಮೂಡದ ಕಾರಣ, ಮೊದಲು ಸ್ಥಳೀಯವಾಗಿ ಚರ್ಚಿಸಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಿ. ನಂತರ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಹೇಳಿದರು ಎಂದು ತಿಳಿದುಬಂದಿದೆ.
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿರುವ ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬೆಂಗಳೂರು ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿರುವ ರಾಮಚಂದ್ರಗೌಡ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿರುವ ಅಮರನಾಥ ಪಾಟೀಲ್ ಅವರ ಅವಧಿ 2018ರ ಜೂನ್ 18ಕ್ಕೆ ಮುಕ್ತಾಯಗೊಳ್ಳಲಿದೆ. ಈ ಮೂರೂ ಕ್ಷೇತ್ರಗಳು ಬಿಜೆಪಿ ವಶದಲ್ಲಿದೆ. ಅದೇರೀತಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್‌ನ ಮರಿತಿಬ್ಬೇಗೌಡ, ಈಶಾನ್ಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವ ಜೆಡಿಎಸ್‌ನ ರಮೇಶ್‌ಬಾಬು ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿಯ ಗಣೇಶ್ ಕಾರ್ಣಿಕ್ ಅವರ ಅವಧಿಯೂ ಇದೇ ವೇಳೆ ಮುಕ್ತಾಯಗೊಳ್ಳುತ್ತದೆ.
ಪದವೀಧರ ಕ್ಷೇತ್ರಗಳ ಪೈಕಿ ನೈರುತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿರುವ ರಾಮಚಂದ್ರಗೌಡ ಅವರು ಚುನಾವಣಾ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಶಂಕರಮೂರ್ತಿ ಅವರು ತಮ್ಮ ಪುತ್ರ ಅರುಣ್ ಹೇಸರು ಪ್ರಸ್ತಾಪಿಸಿದ್ದರೆ, ರಾಜ್ಯಸಭೆ ಮಾಜಿ ಸದಸ್ಯ ಆಯನೂರು ಮಂಜುನಾಥ್ ಮತ್ತು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಕೂಡ ಕಣ್ಣಿಟ್ಟಿದ್ದರು. ಅದೇರೀತಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಜ್ಯ ಬಿಜೆಪಿ ಸಹವಕ್ತಾರ ಎ.ಎಚ್.ಆನಂದ್, ಮತ್ತು ಧನಂಜಯ ಅವರ ಹೆಸರು ಇದ್ದರೆ, ಕೋರ್ ಕಮಿಟಿ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು. ಹೀಗಾಗಿ ಗೊಂದಲ ಉಂಟಾಗಿದ್ದರಿಂದ ಮೊದಲು ಸ್ಥಳೀಯವಾಗಿ ತೀರ್ಮಾನ ಕೈಗೊಂಡು ನಂತರ ಕೋರ್ ಕಮಿಟಿ ಮುಂದೆ ತನ್ನಿ ಎಂದು ಜಾವಡೇಕರ್ ಸಲಹೆ ಮಾಡಿದರು ಎನ್ನಲಾಗಿದೆ.
ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಇಲ್ಲದೇ ಇದ್ದರೂ ಎಲ್ಲಾ ಕ್ಷೇತ್ರಗಳಿಗೆ ಒಟ್ಟಾಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕು ಎಂಬ ಕಾರಣಕ್ಕೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.