Advertisement

Kashmir ಚುನಾವಣೆ,ರಾಜ್ಯ ಸ್ಥಾನಮಾನ: ಕೇಂದ್ರದ ದಿಟ್ಟ ನಡೆ

01:20 AM Jun 22, 2024 | Team Udayavani |

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದ 5 ವರ್ಷಗಳ ಬಳಿಕ ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಸಲು ಆಸಕ್ತಿ ತೋರಿದೆ. ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಜಮ್ಮು-ಕಾಶ್ಮೀರಕ್ಕೆ ಶೀಘ್ರವೇ ರಾಜ್ಯ ಸ್ಥಾನಮಾನ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಆಡಳಿತ ಸೂತ್ರವನ್ನು ಜನಪ್ರತಿನಿಧಿಗಳು ಮರಳಿ ಹಿಡಿಯುವ ದಿನಗಳು ಸಮೀಪಿಸಿದಂತೆ ತೋರುತ್ತಿದ್ದು, ಇಲ್ಲಿನ ಅಭಿವೃದ್ಧಿ ಪರ್ವಕ್ಕೆ ಮತ್ತಷ್ಟು ವೇಗ ಲಭಿಸಲಿದೆ.

Advertisement

2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜಿಸಿದಾಗಿನಿಂದ ಅಲ್ಲಿನ ಆಡಳಿತ ಸಂಪೂರ್ಣ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ 2019ರ ಆಗಸ್ಟ್‌ 5ರಂದು ರದ್ದುಗೊಳಿಸುವ ಮೂಲಕ ಈ ಬಗೆಗಿನ ವಿವಾದಕ್ಕೆ ತೆರೆ ಎಳೆದಿತ್ತು. ಭದ್ರತೆ ಮತ್ತು ಕಾನೂನು-ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತ್ತು. ಅಲ್ಲದೆ ಜಮ್ಮು -ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಿ, ಪ್ರಜಾಪ್ರಭುತ್ವ ರೀತ್ಯ ಸರಕಾರವನ್ನು ಹೊಂದಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ ಉಗ್ರರ ಹಾವಳಿ ಮುಂದುವರಿದಿದ್ದರಿಂದಾಗಿ ಕಳೆದ 2-3 ವರ್ಷಗಳಿಂದ ವಿಧಾನಸಭೆ ಚುನಾವಣ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ 2024ರ ಸೆಪ್ಟಂಬರ್‌ ಅಂತ್ಯದೊಳಗಾಗಿ ಚುನಾವಣೆ ನಡೆಸುವಂತೆ ಕೇಂದ್ರ ಸರಕಾರ ಮತ್ತು ಚುನಾವಣ ಆಯೋಗಕ್ಕೆ ನಿರ್ದೇಶ ನೀಡಿತ್ತು. ಆದರೆ ಕಣಿವೆ ರಾಜ್ಯದಲ್ಲಿನ ಅಶಾಂತಿ, ಕಾನೂನು-ಸುವ್ಯವಸ್ಥೆ, ಉಗ್ರರ ಉಪಟಳ ಮತ್ತಿತರ ಕಾರಣಗಳಿಂದಾಗಿ ಈ ಬಗೆಗೆ ಅನುಮಾನಗಳು ಕಾಡುತ್ತಲೇ ಇದ್ದವು.

ಆದರೆ ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಜಮ್ಮು- ಕಾಶ್ಮೀರದ ಐದು ಲೋಕಸಭೆ ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 58.58ರಷ್ಟು ಮತದಾನವಾಗುವ ಮೂಲಕ ಕಣಿವೆ ರಾಜ್ಯದ ಜನರು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದರು. ಇದು ಚುನಾವಣ ಆಯೋಗ ಮತ್ತು ಕೇಂದ್ರ ಸರಕಾರಕ್ಕೆ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ. ಅದರಂತೆ ಚುನಾವಣ ಆಯೋಗ ಈಗ ಜಮ್ಮು-ಕಾಶ್ಮೀರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರತವಾಗಿದ್ದು, ಆಗಸ್ಟ್‌ 20ರೊಳಗಾಗಿ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಭರವಸೆಯನ್ನೂ ನೀಡಿರುವುದು ಸಹಜವಾಗಿಯೇ ಕಣಿವೆ ರಾಜ್ಯದ ಜನತೆಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಲೋಕಸಭೆ ಚುನಾವಣೆಯಿಂದೀಚೆಗೆ ಕಣಿವೆ ಪ್ರದೇಶ ಮಾತ್ರವಲ್ಲದೆ ಜಮ್ಮು ಪ್ರದೇಶದಲ್ಲೂ ಉಗ್ರರ ಉಪಟಳ ಒಂದಿಷ್ಟು ಹೆಚ್ಚಿದ್ದು, ಭದ್ರತಾ ಪಡೆಗಳು ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಸದೆಬಡಿಯುತ್ತಲೇ ಬಂದಿವೆ. ಕಣಿವೆ ರಾಜ್ಯದ ಶಾಂತಿ, ಕಾನೂನು-ಸುವ್ಯವಸ್ಥೆಗೆ ಭಂಗ ತರುವ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಇರಿಸುವ ಪ್ರಯತ್ನವಾಗಿ ಪಾಕಿಸ್ಥಾನ ಪ್ರಚೋದಿತ ಉಗ್ರರು ಪದೇಪದೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಕೇಂದ್ರ ಸರಕಾರ ಉಗ್ರರ ದಮನದ ಜತೆಜತೆಯಲ್ಲಿ ರಾಜ್ಯದಲ್ಲಿ ಸರಕಾರ ರಚನೆ, ಅಭಿವೃದ್ಧಿ ಯೋಜನೆಗಳ ಅನುಷ್ಠಾನದತ್ತ ಹೆಚ್ಚಿನ ಗಮನ ಹರಿಸಿದೆ. ಸಹಜವಾಗಿಯೇ ಇವೆಲ್ಲವೂ ಕಣಿವೆ ರಾಜ್ಯದ ಜನತೆಯನ್ನು ದೇಶದ ಮುಖ್ಯವಾಹಿನಿ ಜತೆ ಕರೆದೊಯ್ಯುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next