Advertisement

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

09:34 PM Apr 17, 2024 | Team Udayavani |

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಎ. 19ರಂದು(ಶುಕ್ರವಾರ) ನಡೆಯಲಿದ್ದು, ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಒಟ್ಟು 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜತೆಗೆ, ಅರುಣಾಚಲ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆಗೂ ಮತದಾನ ನಡೆಯಲಿದೆ.

Advertisement

ಮೊದಲ ಹಂತದಲ್ಲಿ 8 ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಬ್ಬರು ಮಾಜಿ ರಾಜ್ಯಪಾಲರ ಅದೃಷ್ಟ ಪರೀಕ್ಷೆ ನಡೆಯಲಿದೆ. ಮೊದಲ ಹಂತದಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1,491 ಪುರುಷ ಅಭ್ಯರ್ಥಿಗಳಿದ್ದಾರೆ.

ಒಟ್ಟು ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಪೈಕಿ ಏ.19ರ ಮೊದಲ ಹಂತದಲ್ಲೇ ಅತಿ ಹೆಚ್ಚು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನ ಎಲ್ಲ 39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆ ಕಾರಣಕ್ಕಾಗಿ ಬಿಜೆಪಿ, ಕಾಂಗ್ರೆಸ್‌ ಮತ್ತು ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿವೆ. ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಹೆಚ್ಚು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಬಿಜೆಪಿ ಪರವಾಗಿ, ರಾಹುಲ್‌ ಗಾಂಧಿ ಕಾಂಗ್ರೆಸ್‌ ಪರವಾಗಿ ಭರ್ಜರಿ ಮತಯಾಚನೆ ಮಾಡಿದ್ದಾರೆ. ಜತೆಗೆ ಪ್ರಾದೇಶಿಕ ಪಕ್ಷಗಳ ನಾಯಕರು ಹಾಗೂ ಮುಖ್ಯಮಂತ್ರಿಗಳಾದ ಎಂ.ಕೆ.ಸ್ಟಾಲಿನ್‌ ಅವರು ತಮ್ಮ ರಾಜ್ಯಗಳಲ್ಲಿ ಮತಯಾಚಿಸಿದ್ದಾರೆ.

8 ಸಚಿವರು ಯಾರು?
ನಿತಿನ್‌ ಗಡ್ಕರಿ, ಕಿರಣ್‌ ರಿಜಿಜು, ಸರ್ಬಾನಂದ್‌ ಸೋನೋವಾಲ್‌, ಸಂಜೀವ್‌ ಬಲಿಯಾನ್‌, ಜಿತೇಂದ್ರ ಸಿಂಗ್‌, ಭೂಪೇಂದ್ರ ಯಾದವ್‌, ಅರ್ಜುನ್‌ ರಾಮ್‌ ಮೇಘಾಲ್‌ ಅವರು ಮೊದಲ ಹಂತದ ಚುನಾವಣ ಕಣದಲ್ಲಿರುವ ಕೇಂದ್ರ ಸಚಿವರು. ಜತೆಗೆ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರ್‌ರಾಜನ್‌ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಅಣ್ಣಾ ಮಲೈ, ಡಿಎಂಕೆಯ ಎ.ರಾಜಾ, ಕನಿಮೋಳಿ ಸಹಿತ ಇನ್ನೂ ಅನೇಕ ಪ್ರಮುಖರು ಕಣದಲ್ಲಿದ್ದಾರೆ.

Advertisement

ಎಲ್ಲೆಲ್ಲಿ ಚುನಾವಣೆ?:
ಅರುಣಾಚಲ ಪ್ರದೇಶ (2), ಅಸ್ಸಾಂ (5), ಬಿಹಾರ (4), ಛತ್ತೀಸ್‌ಗಢ (1), ಮಧ್ಯ ಪ್ರದೇಶ (6), ಮಹಾರಾಷ್ಟ್ರ (5), ಮಣಿಪುರ (2), ಮೇಘಾಲಯ (2), ರಾಜಸ್ಥಾನ (12), ತಮಿಳುನಾಡು (39), ಉತ್ತರ ಪ್ರದೇಶ (8), ಪಶ್ಚಿಮ ಬಂಗಾಲ (3) ಸಹಿತ ಅಂಡಮಾನ್‌ ಮತ್ತು ನಿಕೋಬಾರ್‌, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ ಮತ್ತು ಲಕ್ಷದ್ವೀಪಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಕಣದಲ್ಲಿರುವ ಪ್ರಮುಖರು
– ನಿತಿನ್‌ ಗಡ್ಕರಿ. ಬಿಜೆಪಿ ಅಭ್ಯರ್ಥಿ. ಮಹಾರಾಷ್ಟ್ರದ ನಾಗ್ಪುರ್‌ ಕ್ಷೇತ್ರದಿಂದ ಸ್ಪರ್ಧೆ. 3ನೇ ಬಾರಿಗೆ ಅದೃಷ್ಟ ಪರೀಕ್ಷೆ
– ಜಿತಿನ್‌ ಪ್ರಸಾದ್‌. ಬಿಜೆಪಿ ಅಭ್ಯರ್ಥಿ. ಉತ್ತರ ಪ್ರದೇಶದ ಪಿಲಿಭಿತ್‌ ಕ್ಷೇತ್ರದಿಂದ ಸ್ಪರ್ಧೆ. ಮೊದಲ ಬಾರಿ ಸ್ಪರ್ಧೆ
-ತಮಿಳಿಸೈ ಸೌಂದರ್‌ರಾಜನ್‌. ಬಿಜೆಪಿ ಅಭ್ಯರ್ಥಿ. ತಮಿಳುನಾಡಿನ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ.
– ಕಾರ್ತಿ ಚಿದಂಬರಂ. ಕಾಂಗ್ರೆಸ್‌ ಅಭ್ಯರ್ಥಿ. ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧೆ.
– ದಯಾನಿಧಿ ಮಾರನ್‌. ಡಿಎಂಕೆ ಅಭ್ಯರ್ಥಿ. ತಮಿಳುನಾಡಿನ ಚೆನ್ನೈ ಸಂಟ್ರೆಲ್‌ ಕ್ಷೇತ್ರದಿಂದ ಸ್ಪರ್ಧೆ. ಹಾಲಿ ಸಂಸದ.
– ನಕುಲ್‌ನಾಥ್‌. ಕಾಂಗ್ರೆಸ್‌ ಅಭ್ಯರ್ಥಿ. ಮಧ್ಯ ಪ್ರದೇಶದ ಛಿಂದ್ವಾರ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.
– ಇಮ್ರಾನ್‌ ಮೂಸದ್‌. ಕಾಂಗ್ರೆಸ್‌ ಅಭ್ಯರ್ಥಿ. ಉತ್ತರ ಪ್ರದೇಶದ ಸಹರನ್‌ಪುರ್‌ ಕ್ಷೇತ್ರದಿಂದ ಸ್ಪರ್ಧೆ.
– ಕಿರಣ್‌ ರಿಜಿಜು. ಬಿಜೆಬಿ ಅಭ್ಯರ್ಥಿ, ಅರುಣಾಚಲ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧೆ.
– ಸರ್ಬಾನಂದ್‌ ಸೋನೋವಾಲ್‌. ಬಿಜೆಪಿ ಅಭ್ಯರ್ಥಿ. ಅಸ್ಸಾಂನ ದಿಬ್ರುಗಢ ಕ್ಷೇತ್ರದಿಂದ ಸ್ಪರ್ಧೆ.

ಅರುಣಾಚಲ, ಸಿಕ್ಕಿಂ ವಿಧಾನಸಭೆ ಚುನಾವಣೆ
ಲೋಕಸಭೆ ಮೊದಲ ಹಂತದ ಸಾರ್ವತ್ರಿಕ ಚುನಾವಣೆ ಜತೆಗೆ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಅರುಣಾಚಲದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳಿದ್ದು, ಈ ಪೈಕಿ 50 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿಕ್ಕಿಂನಲ್ಲಿ 32 ವಿಧಾನಸಭೆ ಕ್ಷೇತ್ರಗಳಿವೆ. ಒಟ್ಟು 146 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು ಅಭ್ಯರ್ಥಿಗಳು- 1,625
ಮಹಿಳೆಯರು- 134
ಪುರುಷರು- 1,491
ಒಟ್ಟು ರಾಜ್ಯಗಳು- 21
ಒಟ್ಟು ಕ್ಷೇತ್ರಗಳು- 101

Advertisement

Udayavani is now on Telegram. Click here to join our channel and stay updated with the latest news.

Next