ನವದೆಹಲಿ: ಚುನಾವಣೆಗಳು ನಡೆಯುತ್ತಲೇ ಇರುತ್ತವೆ, ಆದರೆ ಸಂಸತ್ತಿನ ಬಜೆಟ್ ಅಧಿವೇಶನವು ಬಹಳ ಮಹತ್ವದ್ದಾಗಿದ್ದು, ಅದನ್ನು ಫಲಪ್ರದಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳಿದ್ದು, ಭಾರತಕ್ಕೆ ಆರ್ಥಿಕ ಪ್ರಗತಿ, ಲಸಿಕೆ ಕಾರ್ಯಕ್ರಮದ ಮೂಲಕ ವಿಶ್ವದಲ್ಲಿ ವಿಶ್ವಾಸವನ್ನು ತುಂಬಲಾಗುತ್ತಿದೆ ಎಂದು ಪ್ರತಿಪಾದಿಸಿದರು.
ಚುನಾವಣೆಗಳು ಅಧಿವೇಶನ ಮತ್ತು ಚರ್ಚೆಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದು ನಿಜ. ಆದರೆ ನಾನು ಎಲ್ಲಾ ಸಂಸದರನ್ನು ವಿನಂತಿಸುತ್ತೇನೆ ಚುನಾವಣೆಗಳು ನಡೆಯುತ್ತವೆ ಆದರೆ ಬಜೆಟ್ ಅಧಿವೇಶನವು ಇಡೀ ವರ್ಷಕ್ಕೆ ನೀಲನಕ್ಷೆಯನ್ನು ಹಾಕಿ ಕೊಡುತ್ತದೆ ಮತ್ತು ಆದ್ದರಿಂದ ಇದು ಬಹಳ ಮುಖ್ಯವಾಗಿದೆ ಎಂದರು.
“ನಾವು ಈ ಅಧಿವೇಶನವನ್ನು ಹೆಚ್ಚು ಫಲಪ್ರದಗೊಳಿಸುತ್ತೇವೆ, ಮುಂಬರುವ ವರ್ಷದಲ್ಲಿ ದೇಶವನ್ನು ಹೊಸ ಆರ್ಥಿಕ ಎತ್ತರಕ್ಕೆ ಕೊಂಡೊಯ್ಯಲು ಉತ್ತಮ ಅವಕಾಶವಿದೆ. ದೇಶವನ್ನು ಶೀಘ್ರವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸುವಂತೆ ಮೋದಿ ಕರೆ ನೀಡಿದರು.
ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ, ಗೋವಾ, ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಧಿವೇಶನ ನಡೆಯುತ್ತಿದೆ.