Advertisement

ಜಿಲ್ಲೆಯಲ್ಲಿ ತಿಂಗಳ ಚುನಾವಣಾ ಯಾತ್ರೆ ಜೋರು

01:03 PM Jan 08, 2018 | Team Udayavani |

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರ‌ವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿರುವ ಮೂರು ರಾಜಕೀಯ ಪಕ್ಷಗಳ ನಾಯಕರು ಕೈಗೊಂಡಿರುವ ಚುನಾವಣಾ ಯಾತ್ರೆಗಳು ಈ ತಿಂಗಳು ಮೈಸೂರು ಜಿಲ್ಲೆಯಲ್ಲಿ ನಡೆಯಲಿವೆ.

Advertisement

ತಮಗೆ ರಾಜಕೀಯವಾಗಿ ಜನ್ಮ ಹಾಗೂ ಪುನರ್‌ ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಕಡೇ ಚುನಾವಣೆ ಎದುರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಬೆನ್ನಲ್ಲೇ ಜೆಡಿಎಸ್‌ ನಾಯಕರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ಬೃಹತ್‌ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದು,

ಸೋಮವಾರ ಮತ್ತೆ ಮೈಸೂರಿಗೆ ಆಗಮಿಸುವ ಜೆಡಿಎಸ್‌ ರಾಜಾಧ್ಯಕ್ಷ ಕುಮಾರಸ್ವಾಮಿ ಅವರು, ಬೆಳಗ್ಗೆ 11ಕ್ಕೆ ಕಲಾಮಂದಿರದಲ್ಲಿ ವಿವಿಧ ಕ್ಷೇತ್ರಗಳ ತಜ್ಞರ ಜತೆಗೆ, ಮಧ್ಯಾಹ್ನ 3.30ಕ್ಕೆ ಉದ್ಯಮಿಗಳ ಜತೆಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ.

ಮುಖ್ಯಮಂತ್ರಿ ಯಾತ್ರೆ: ಇನ್ನು ತಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡಲು ರಾಜ್ಯ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನವ ಕರ್ನಾಟಕ ನಿರ್ಮಾಣ ಯಾತ್ರೆ ಜ.11ರಂದು ಮೈಸೂರು ಜಿಲ್ಲೆಯಲ್ಲಿ ನಡೆಯಲಿದೆ.

ಅಂದು ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರ, ನಂಜನಗೂಡು ವಿಧಾನಸಭಾ ಕ್ಷೇತ್ರ ಹಾಗೂ ತಮ್ಮ ಸ್ವಕ್ಷೇತ್ರ ವರುಣಾ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಕ್ಷೇತ್ರ ತಿ.ನರಸೀಪುರ ಕ್ಷೇತ್ರದ ಸಮಾವೇಶವನ್ನು ತಿ.ನರಸೀಪುರದಲ್ಲಿ ನಡೆಸಲಿದ್ದಾರೆ.

Advertisement

ಪರಿವರ್ತನಾ ಯಾತ್ರೆ: ಇನ್ನು ಮುಂಬರುವ ಚುನಾವಣೆಗೆ ರಾಜ್ಯದಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಕಳೆದ ಎರಡು ತಿಂಗಳಿಂದ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆ ಕೂಡ ಇದೇ ತಿಂಗಳು ಮೈಸೂರಿಗೆ ಆಗಮಿಸಲಿದೆ.

ಜ.22ರಂದು ಬಿಜೆಪಿ ಪರಿವರ್ತನಾ ಯಾತ್ರೆಯ ಬಹಿರಂಗ ಸಭೆಗಳು ಜಿಲ್ಲೆಯ ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ವರುಣಾ, ಕೆ.ಆರ್‌.ನಗರ, ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ನಡೆಯಲಿದ್ದು, ಜ.25ರಂದು ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳನ್ನು ಒಳಗೊಂಡಂತೆ ಮೈಸೂರು ನಗರದಲ್ಲಿ ಬೃಹತ್‌ ರ್ಯಾಲಿ ಆಯೋಜಿಸಲಾಗಿದೆ.

ಹಿತೈಷಿಗಳ ಓಲೈಕೆಯಲ್ಲಿ ಆಕಾಂಕ್ಷಿಗಳು ಬ್ಯುಸಿ
ಮೈಸೂರು:
ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ವಿವಿಧ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳು ತಮ್ಮ ಚಟುವಟಿಕೆಯನ್ನು ತೀವ್ರಗೊಳಿಸಿದ್ದಾರೆ.
ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಪ್ರಸನ್ನ ಎನ್‌.ಗೌಡ ಅವರು ಮನೆ ದೇವರ ಪೂಜೆ ಹೆಸರಿನಲ್ಲಿ ನಗರದ ಪ್ರೀಮಿಯರ್‌ ಕನ್ವೆನನ್‌ ಸೆಂಟರ್‌ನಲ್ಲಿ ಹಿತೈಷಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಜನ ಚೇತನ ಟ್ರಸ್ಟ್‌ ಮೂಲಕ ಕೆರೆ ಸಂರಕ್ಷಣೆ, ಸಾವಯವ ಕೃಷಿ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಪ್ರಸನ್ನ ಎನ್‌.ಗೌಡ ಅವರು, ಭಾನುವಾರ ಸುಮಾರು ನಾಲ್ಕು ಸಾವಿರ ಜನರನ್ನು ಸೇರಿಸಿ ಅಭಿಪ್ರಾಯ ಸಂಗ್ರಹಿಸಿದ್ದು, ಬಿಜೆಪಿಯ ಭದ್ರಕೋಟೆಯಾಗಿದ್ದ ಚಾಮರಾಜ ಕ್ಷೇತ್ರದಲ್ಲಿ ಪಕ್ಷ ತಮಗೆ ಟಿಕೆಟ್‌ ನೀಡಿದರೆ ಈ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಪ್ರಸನ್ನ ಗೌಡ.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಸ್‌ಎಂಪಿ ಡೆವಲಪರ್ನ ಶಿವಪ್ರಕಾಶ್‌, ತಮ್ಮ ಬೆಂಬಲಿಗರೊಂದಿಗೆ ನಗರದ ಬಸವೇಶ್ವರ ವೃತ್ತದ ಬಸವೇಶ್ವರ ಪುತ್ಥಳಿ ಬಳಿಯಿಂದ ಮೆರವಣಿಗೆ ಮೂಲಕ ನಗರ ಬಿಜೆಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಕೆ.ಆರ್‌.ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರ ಪ್ರಾಬಲ್ಯವಿದ್ದು, ಬಿಜೆಪಿ ಬ್ರಾಹ್ಮಣ ಸಮುದಾಯದವರಿಗೆ ಟಿಕೆಟ್‌ ನೀಡುತ್ತಾ ಬಂದಿದೆ. ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ತಮಗೆ ಟಿಕೆಟ್‌ ನೀಡುವಂತೆ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next