ಸಂಬರಗಿ: ಸಂತ್ರಸ್ತರಿಗೆ ಸರ್ಕಾರದ ಪರಿಹಾರ ಕಲ್ಪಿಸಬೇಕು ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ತಂಗಡಿ ಗ್ರಾಮಸ್ಥರು ತಾಪ ಇಒ ಹಾಗೂ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕೃಷ್ಣಾ ನದಿಗೆ ಪ್ರವಾಹ ಬಂದಾಗ 373 ಕುಟುಂಬಗಳ ಮನೆ ನೀರಿನಿಂದ ಮುಳುಗಿ ಹೋಗಿದ್ದು, ಆ ಕುಟುಂಬಗಳು ಪರಿಹಾರ ಸಿಗದೇ ಬೀದಿಪಾಲಾಗಿವೆ. ಪರಿಹಾರ ನೀಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ನೀಡಿದಿದ್ದರೆ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ತಂಗಡಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡಲಾಗುವುದು. ಅಲ್ಲದೇ ಡಿ. 1ರಂದು ತಂಗಡಿ ಗ್ರಾಮ ಪಂಚಾಯತ ಎದುರಿಗೆ ಧರಣಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದಲ್ಲಿ ಹಾನಿಗೊಂಡ 373 ಕುಟುಂಬಗಳು ಸರಕಾರದಿಂದ ಯಾವುದೇ ಪ್ರಕಾರದ ಸರ್ವೇ ಆಗಿಲ್ಲ. ಸುಮಾರು 120 ಕುಟುಂಬಗಳಿಗೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರವು ದೊರೆತ್ತಿಲ್ಲ. ಬಿದ್ದು ಹೋಗಿರುವ ಕೆಲವು ಮನೆಗಳನ್ನು ಮಾತ್ರ ಸರ್ವೇ ಮಾಡಿ ಪಟ್ಟಿಯನ್ನು ತಯಾರಿಸಿ ಅರ್ಧಕ್ಕೆ ಸರ್ವೇ ಕಾರ್ಯದಿಂದ ಕೈ ಬಿಟ್ಟಿದ್ದಾರೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಸಂತ್ರಸ್ತರ ನೋವಿಗೆ ಸ್ಪಂದಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ರಾಜಾರಾಮ ಪಾಟೀಲ ಶ್ರೀಕಾಂತ ಪಾಟೀಲ, ರಾಮಚಂದ್ರ ಮಹಾದೇವ ಪಾಟೀಲ, ಪೊಪಟ ಮೊರೆ, ಶಂಕರ ಚೌಗಲಾ, ಮಲ್ಲಪ್ಪ ಬಂಡಗರ, ಸಲಿಂ ಖೀಲೆದಾರ ಸೇರಿದಂತೆ ಗ್ರಾಮದ ಗಣ್ಯರು ಹಾಜರಿದ್ದರು.