ಶಿಗ್ಗಾವಿ/ಸವಣೂರು: ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್‌ನ ಒಡೆದಾಳುವ ನೀತಿಯ ನಡುವೆ ನಡೆದಿದೆ. ಈ ಬಾರಿ ಮತ್ತೂಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಬಹಿರಂಗ ಪ್ರಚಾರದ ಕೊನೆದ ದಿನವಾದ ಸೋಮವಾರ ಸ್ವಕ್ಷೇತ್ರ ಶಿಗ್ಗಾವಿಯ ವನಹಳ್ಳಿ, ಹನುಮನಹಳ್ಳಿ, ಹಿರೇಮಲ್ಲೂರು, ಸವಣೂರು ತಾಲೂಕಿನ ಮಂತ್ರೋಡಿ, ಸವಣೂರು ಪಟ್ಟಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮಾತನಾಡಿದರು.
ಡಬಲ್ ಎಂಜಿನ್ ಸರಕಾರದ ಸಾಧನೆ ಇಟ್ಟುಕೊಂಡು ನಾವು ಮತ ಕೇಳುತ್ತಿದ್ದೇವೆ. ಹಿಂದಿನ ಸಮ್ಮಿಶ್ರದಿಂದ ಬೇಸತ್ತು ಅನೇಕ ಶಾಸಕರು ನಮ್ಮ ಜತೆ ಬಂದರು. ಇದರಿಂದ ಬಿಜೆಪಿ ಸರಕಾರ ಬಂದು ನಾಲ್ಕು ವರ್ಷಗಳ ಆಡಳಿತದಲ್ಲಿ ಕ್ಷೇತ್ರ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೋವಿಡ್ ವೇಳೆ ಪ್ರಧಾನಿ ಮೋದಿ ಉಚಿತ ಲಸಿಕೆ ನೀಡಿದ್ದರಿಂದ ಎಲ್ಲರೂ ಆರೋಗ್ಯ ಸುರಕ್ಷಾ ಚಕ್ರದಲ್ಲಿ ಇರುವಂತಾಯಿತು. ರೈತರ ಸಂಕಷ್ಟ ನನಗೆ ಗೊತ್ತಿದೆ. ಅದಕ್ಕಾಗಿ ಸಿಎಂ ಆಗಿ ನಾಲ್ಕು ಗಂಟೆಯೊಳಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇನೆ. ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡಿದ್ದೇನೆ ಎಂದರು.
2018ರಲ್ಲಿ ನೀವು ಕೊಟ್ಟಿರುವ ಮತದ ಶಕ್ತಿ ಬಹಳ ದೊಡ್ಡದಿದೆ. ನಾನು ಶಾಸಕ, ಸಚಿವ, ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ನಡುವೆ ನಡೆದಿದೆ. ಸಮ್ಮಿಶ್ರ ಸರಕಾರ ಯಾವುದೇ ರೀತಿಯ ಕೆಲಸ ಮಾಡಲಿಲ್ಲ. ಅನಂತರ ಬಂದ ಬಿಜೆಪಿ ಸರಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.