Advertisement

ಏಕಕಾಲದಲ್ಲಿ  ಚುನಾವಣೆ : ರಾಷ್ಟ್ರಪತಿ ಕೋವಿಂದ್‌ ಬೆಂಬಲ

06:00 AM Jan 30, 2018 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಏಕಕಾಲಕ್ಕೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆ ಅತ್ಯಂತ ಸೂಕ್ತವಾಗಿದ್ದು, ಈ ಬಗ್ಗೆ ಚರ್ಚಿಸಿ, ದೇಶದ ಎಲ್ಲ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರುವ ಆವಶ್ಯಕತೆಯಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ.

Advertisement

ಸೋಮವಾರ ಆರಂಭಗೊಂಡ ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಜಂಟಿ ಸದನಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರಪತಿ ಹುದ್ದೆಗೇರಿದ ಅನಂತರ, ಅವರ ಮೊದಲ ಬಜೆಟ್‌ ಅಧಿವೇಶನದ ಭಾಷಣ ಇದಾಗಿತ್ತು. ಈ ವೇಳೆ ಕೇಂದ್ರ ಸರಕಾರದ ಸಾಧನೆಗಳು ಹಾಗೂ ಯೋಜನೆಗಳನ್ನು ಬಣ್ಣಿಸಿದ ಅವರು, “ರಾಜ್ಯಗಳು ಹಾಗೂ ಕೇಂದ್ರದಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಚುನಾವಣೆ ನಡೆಯುವುದರಿಂದ ಅಪಾರ ಹಣ, ಮಾನವ ಸಂಪನ್ಮೂಲ ವ್ಯರ್ಥವಾಗು ತ್ತದೆ.

ದೇಶದ ಅಭಿವೃದ್ಧಿಗೂ ಇದು ಮಾರಕ. ಹಾಗಾಗಿ, ವಿಧಾನಸಭೆ ಮತ್ತು ಲೋಕಸಭೆಗೆ ಏಕ ಕಾಲದಲ್ಲಿ ಚುನಾವಣೆ ನಡೆಯುವುದು ಉತ್ತಮ. ಈ ಕುರಿತಂತೆ ಸೂಕ್ತ ನಿರ್ಧಾರಕ್ಕೆ ಬರಲು ಅನೇಕ ಚರ್ಚೆಗಳಾಗಬೇಕು. ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಬೇಕು’ ಎಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಏಕಕಾಲದ ಚುನಾವಣೆಗೆ ಒತ್ತು ನೀಡಿದ್ದರು. ಈಗ ರಾಷ್ಟ್ರಪತಿಯೂ ಅದರ ಪರ ಧ್ವನಿಯೆತ್ತಿರುವುದು ಈ ಪ್ರಸ್ತಾವಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದಂತಾಗಿದೆ.

ಸರ್ವರಿಗೂ ಸೂರು: 2022ರ ಹೊತ್ತಿಗೆ ಎಲ್ಲ ನಿರ್ಗತಿಕರಿಗೆ ಸೂರು ಕಲ್ಪಿಸುವ ಕನಸು ಹೊತ್ತಿರುವ ಕೇಂದ್ರ ಸರಕಾರ, ಕಳೆದ ಮೂರೂವರೆ ವರ್ಷಗಳಲ್ಲಿ 93 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದೆ. ಅಲ್ಲದೆ, ಈ ಮನೆಗಳಿಗೆ ನೀರು, ವಿದ್ಯುತ್‌ ಸೌಕರ್ಯಗಳನ್ನೂ ನೀಡಲಾಗಿದೆ ಎಂದು ವಿವರಿಸಿದರು.

ಶಿಕ್ಷಣಕ್ಕೆ ಮಹತ್ವ: ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರಕಾರ ಹೆಚ್ಚು ಆಸ್ಥೆ ಹೊಂದಿದೆ ಎಂದ ಅವರು, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಾಂಸ್ಥಿಕ ಜವಾಬ್ದಾರಿಗಳ ಅರಿವು ತರುವ ಉದ್ದೇಶದಿಂದ “ಅಟಲ್‌ ಇನ್ನೋವೇಷನ್‌ ಮಿಷನ್‌’ ಕಾರ್ಯಕ್ರಮ ಜಾರಿಗೆ ತರಲಾಗಿದ್ದು, ಇದರಡಿ 2,400 “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ಗಳಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ ಎಂದರು.

Advertisement

ಆತ್ಮಗೌರವದ ಜೀವನ: ಇದೇ ಸಂದರ್ಭ ತ್ರಿವಳಿ ತಲಾಖ್‌ ವಿಚಾರವನ್ನೂ ಪ್ರಸ್ತಾವಿಸಿದ ಅವರು, ಮುಸ್ಲಿಂ ಮಹಿಳೆಯರು ಆತ್ಮ ಗೌರವದಿಂದ ಜೀವಿಸಲು ಸರಕಾರ ಅವಕಾಶ ಮಾಡಿಕೊಡಲು ಮುಂದಾಗಿದೆ. ಸದ್ಯದಲ್ಲೇ ಈ ಮಸೂದೆ ಅಂಗೀ ಕಾರವಾಗಿ ಜಾರಿಯಾಗುವ ನಿರೀಕ್ಷೆಯಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು.

ಆರೋಗ್ಯ ಭಾಗ್ಯ: ಮಕ್ಕಳನ್ನು ಭಯಾನಕ ರೋಗಗಳಿಂದ ಮುಕ್ತಗೊಳಿ ಸಲು ಹಮ್ಮಿಕೊಳ್ಳುವ ಲಸಿಕೆ ಕಾರ್ಯಕ್ರಮಗಳ ಸಂಖ್ಯೆ ವಾರ್ಷಿಕವಾಗಿ ಶೇ. 1ರಿಂದ ಶೇ. 6.7ಕ್ಕೆ ಹೆಚ್ಚಳವಾಗಿದೆ ಎಂದ ಕೋವಿಂದ್‌, ಕೇಂದ್ರ ಸರಕಾರದ ಹೊಸ “ರಾಷ್ಟ್ರೀಯ ಆರೋಗ್ಯ ನೀತಿ’ಯು ಜನರಿಗೆ ಅವರ ಕೈಗೆಟಕುವ ಬೆಲೆಯಲ್ಲಿ ಆರೋಗ್ಯ ಸಿಗುವಂತೆ ಮಾಡಿದೆ. ವಾರ್ಷಿಕ ಆರೋಗ್ಯ ಕಾರ್ಯಕ್ರಮಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗೀಯರ ಮಕ್ಕಳಿಗೂ ಔಷಧಗಳು, ಲಸಿಕೆಗಳು ಸಕಾಲದಲ್ಲಿ ಸಿಗುವಂತಾಗಿವೆೆ. ಇದಕ್ಕೆ ಪೂರಕವಾಗಿ, “”ಮಿಷನ್‌ ಇಂದ್ರಧನುಷ್‌’ ಎಂಬ ಕಾರ್ಯಕ್ರಮವನ್ನೂ ಅನುಷ್ಠಾನಗೊಳಿಸಿದೆ ಎಂದರು.

ರೈಲ್ವೇ ಅಭಿವೃದ್ಧಿಗೆ ಹೆಚ್ಚಿನ ಒತ್ತು: ರೈಲ್ವೇಯು ಈಗಲೂ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವುದರಿಂದ, ಈ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು, ಆಧುನೀಕರಣಗೊಳಿಸುವುದು ಅನಿವಾರ್ಯ. ಹಾಗಾಗಿಯೇ, ಸರಕಾರ, ನಿರಂತರವಾಗಿ ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next