Advertisement

ಬಿಸಿಲುನಾಡಲ್ಲಿ ಚುನಾವಣೆ ಬಿಸಿಯೇ ಇಲ್ಲ!

03:40 PM Apr 16, 2019 | pallavi |
ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣಾ ಖದರ್ರೆ ಬೇರೆ. ಸೋನಿಯಾಗಾಂಧಿ -ಸುಷ್ಮಾ ಸ್ವರಾಜ್‌ ಸ್ಪರ್ಧೆಯಿಂದಾಗಿ ಬಳ್ಳಾರಿ ಲೋಕಸಭೆ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದ್ದರೆ, ರೆಡ್ಡಿ ಸಹೋದರರು ಪ್ರತಿನಿಧಿಸುವ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರ ತನ್ನದೇ ಆದ ಖದರ್ರು ಹೊಂದಿದೆ.
ಕಳೆದ 2008ರಲ್ಲಿ ಕ್ಷೇತ್ರ ಮರು ವಿಂಗಡೆಯಿಂದಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಹೊಸದಾಗಿ ರಚನೆಯಾಗಿದ್ದು, ಎರಡು ಬಾರಿ ಬಿಜೆಪಿಯ ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ, ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌ ಒಮೆ ಜಯಗಳಿಸಿದ್ದಾರೆ. ರೆಡ್ಡಿ ಸಹೋದರರು ಪ್ರತಿನಿಧಿ ಸುವ ಬಳ್ಳಾರಿ ನಗರ ಕ್ಷೇತ್ರ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ಗಮನ ಸೆಳೆದಿದೆ. ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ ಕ್ಷೇತ್ರದ ಕೆಲ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಮಾಜಿ ಶಾಸಕ ಅನಿಲ್‌ಲಾಡ್‌ ಸಹ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಮತಯಾಚನೆ ಮಾಡುತ್ತಿದ್ದು, ಗಣಿನಗರಿಯಲ್ಲಿ ಲೋಕಸಭೆ ಚುನಾವಣಾ ಖದರ್‌ ನಿಧಾನವಾಗಿ ರಂಗೇರುತ್ತಿದೆ.
ಸಮಸ್ಯೆಗಳ ಗಣಿ: ಅಕ್ರಮ ಗಣಿಗಾರಿಕೆಯಿಂದಾಗಿ ಗಣಿಗಾರಿಕೆಗೆ ಬ್ರೇಕ್‌ ಬಿದ್ದ ಹಿನ್ನೆಲೆಯಲ್ಲಿ ನಗರದಲ್ಲಿನ ಗಣಿ ಕಾರ್ಮಿಕರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದ್ದು, ಪರ್ಯಾಯ ವ್ಯವಸ್ಥೆ ಇಲ್ಲವಾಗಿದೆ. ಈ ಕುರಿತು ಹಲವು ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಹೊರತು, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ತಾಲೂಕಿನ ಕುಡಿತಿನಿ ಬಳಿ ಕೈಗಾರಿಕೆ ಸ್ಥಾಪಿಸುವುದಾಗಿ ರೈತರಿಂದ ವಶಕ್ಕೆ ಪಡೆದ ಜಮೀನುಗಳಲ್ಲಿ ದಶಕ ಕಳೆದರೂ ಏನೂ ಸ್ಥಾಪನೆಯಾಗಿಲ್ಲ.
ಫಲಾನುಭವಿಗಳಿಗೆ, ಸ್ಥಳೀಯರಿಗೆ ಉದ್ಯೋಗ ದೊರೆತಿಲ್ಲ. ನಗರಕ್ಕೆ ಕುಡಿವ ನೀರು ಪೂರೈಸಲು ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆ ಸಂಪರ್ಕವುಳ್ಳ ಎರಡು ಕೆರೆಗಳು ಇದ್ದರೂ, 10 ರಿಂದ 15 ದಿನಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ದಿನದ 24 ಗಂಟೆ (24×7) ಕುಡಿವ ನೀರು ಯೋಜನೆಯೂ ಹಳ್ಳ ಹಿಡಿದಿದ್ದು, ಕ್ಷೇತ್ರದ ಪ್ರಜ್ಞಾವಂತ ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿಂದಿನ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ಗಳು ಸಹ ಈ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಹಾಲಿ ಸಂಸದ, ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರು ಇತ್ತೀಚಿನ ದಿನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ. ಆದರೆ, ಇದು ಚುನಾವಣಾ ಗಿಮಿಕ್ಕೋ ಅಥವಾ ಮುಂದೆಯೂ ಕ್ರಮ ಕೈಗೊಳ್ಳಲಿದ್ದಾರೆಯೇ? ಕಾದು ನೋಡಬೇಕು ಎನ್ನುತ್ತಾರೆ ರೈತರು.
ಚುನಾವಣೆ ಬಗ್ಗೆ ಸ್ಲಂ ಜನರಿಗಿಲ್ಲ ಮಾಹಿತಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ ತಿಂಗಳು ಕಳೆದರೂ, ಕೆಲ ಪ್ರತಿಷ್ಠಿತ ಬಡಾವಣೆ ಹೊರತುಪಡಿಸಿ, ಸ್ಲಂ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಚುನಾವಣೆ ನಡೆಯುತ್ತಿದೆ ಎಂಬ ಬಗ್ಗೆ ಅರಿವೆಯೇ ಇಲ್ಲ. ಯುವಕರು, ಮೊದಲ ಬಾರಿಗೆ ಹಕ್ಕು ಚಲಾಯಿಸುತ್ತಿರುವ ಮತದಾರರಲ್ಲಿ ಚುನಾವಣೆ ಬಗ್ಗೆ ಒಂದಷ್ಟು ಮಾಹಿತಿಯಿದೆ ಹೊರತು, ಇನ್ನುಳಿದ ಹಿರಿಯರಿಗೆ ಈ ಬಗ್ಗೆ ಮಾಹಿತಿಯಿಲ್ಲ. ರಾಜಕೀಯ ಪಕ್ಷಗಳ ಅಬ್ಬರದ ಕೊರತೆಯೂ ಇದಕ್ಕೆ ಕಾರಣವಾಗಿದ್ದು, ಚುನಾವಣೆ ಬಗ್ಗೆ ಜನರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯ, ರಾಷ್ಟ್ರ ನಾಯಕರು ಆಗಮನ: ಲೋಕಸಭೆ ಚುನಾವಣೆ ನಿಮಿತ್ತ ಪ್ರಚಾರಕ್ಕೆಂದು ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌, ಬಿಜೆಪಿ ಪಕ್ಷದಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಆಗಮಿಸಿದ್ದು ಹೊರತುಪಡಿಸಿದರೆ, ಉಳಿದ ಯಾವುದೇ ರಾಜ್ಯ, ರಾಷ್ಟ್ರ ನಾಯಕರು ಈವರೆಗೂ ಆಗಮಿಸಿಲ್ಲ. ಏ.19ಕ್ಕೆ ಕಾಂಗ್ರೆಸ್‌ನ ಮಾಜಿ ಸಿಎಂ ಸಿದ್ದರಾಮಯ್ಯ, ಏ.21ಕ್ಕೆ ಬಿಜೆಪಿಯ ಸ್ಮೃತಿ ಇರಾನಿ ಆಗಮಿಸುವ ಸಾಧ್ಯತೆಯಿದೆ.
ಇನ್ನು ಚುನಾವಣೆ ನಡೆಯುತ್ತಿದ್ದರೂ, ಯುವಕರು, ಮೊದಲ ಬಾರಿ ಹಕ್ಕು ಚಲಾಯಿಸುತ್ತಿರುವ ಮತದಾರರು ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ದಾಳಿ, ರಫೇಲ್‌ ಹಗರಣ ಬಗ್ಗೆ ಅರಿವಿದೆ. ಆದರೆ, ಹಿರಿಯ ಮತದಾರರು, ಕಾರ್ಮಿಕ ಮಹಿಳೆಯರು, ಕಾರ್ಮಿಕರಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೂ, ಜಿಲ್ಲೆಯ ಮತದಾರರು ಯಾರ ಭವಿಷ್ಯ ನಿರ್ಧರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
Advertisement

Udayavani is now on Telegram. Click here to join our channel and stay updated with the latest news.

Next