ಕುಂದಾಪುರ: ಇಂದು ಚುನಾವಣೆಗಳು ವ್ಯಾಪಾರೀಕರಣವಾಗುತ್ತಿದೆ. ಚುನಾವಣೆಗೆ ಕೋಟ್ಯಂತರ ರೂ. ಖರ್ಚು
ಮಾಡುತ್ತಿರುವುದು ಹಾಗೂ ಚುನಾವಣೆಯ ಬಳಿಕ ಕೋಟ್ಯಂತರ ಹಣ. ಜೇಬಿಗಿಳಿಸುವುದೇ ಇಂದಿನ ರಾಜಕಾರಣವಾಗುತ್ತಲಿದೆ. ಪ್ರಾಮಾಣಿಕತೆ ಹಾಗೂ ಬದ್ಧತೆಗಳು ಮರೆಯಾಗಿವೆ. ಇಂತಹ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಪ್ರಾಮಾಣಿಕ, ಉತ್ಕೃಷ್ಟ ಆಡಳಿತ ನೀಡುವ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಮತ್ತೆ ಎದ್ದು ಬರಲಿದೆ ಎಂದು ಜನತಾದಳ (ಸಂಯುಕ್ತ) ಕರ್ನಾಟಕ ಇದರ ರಾಜ್ಯಾಧ್ಯಕ್ಷ ಡಾ|ಎಂ.ಪಿ.ನಾಡಗೌಡ ಹೇಳಿದರು.
ಕುಂದಾಪುರದ ಪಾರಿಜಾತ ಹೊಟೇಲ್‌ನ ಪದ್ಮಾವತಿ ಸಭಾಂಗಣದಲ್ಲಿ ನಡೆದ ಜನತಾದಳ (ಸಂಯುಕ್ತ) ಕರ್ನಾಟಕ ಇದರ ಕಾರ್ಯಕರ್ತರ ಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ರವಿವಾರ ಮಾತನಾಡಿದರು.
ರಾಜಕೀಯ ಪಕ್ಷ ಬೆಳೆಯಬೇಕಾದರೆ ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಸಾಧ್ಯ. ಇಂದು ವಿಧಾನ ಪರಿಷತ್, ವಿಧಾನಸಭೆಯಲ್ಲಿ ತಮ್ಮ ಕ್ಷೇತ್ರದ ಬಗ್ಗೆ ಹೋರಾಟ ನಡೆಸುವ ಜನಪ್ರತಿನಿಧಿಗಳು ವಿರಳವಾಗುತ್ತಿದ್ದಾರೆ. ರಾಮಕೃಷ್ಣ ಹೆಗ್ಡೆ, ಜೆ.ಎಚ್.ಪಟೇಲರಂತಹ ಮುತ್ಸದ್ಧಿ ರಾಜಕಾರಣಿಗಳು ನಮಗೆ ಬೇಕಾಗಿದೆ. ಪಕ್ಷ ಸಂಘಟಿಸುವಾಗ ರಾಜ್ಯದಲ್ಲಿ ಎಲ್ಲವೂ ಒಮ್ಮಲೇ ನಡೆಯುವುದಿಲ್ಲ. ಇಂದು ನಾವು ಕಾವಲುಗಾರ ಪಕ್ಷವಾಗಿ ರಾಜ್ಯದಲ್ಲಿ ಪ್ರಬಲ ಪಕ್ಷವಾಗಿ ಬೆಳೆಯಬೇಕಾಗಿದೆ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ನೀಡಿದ್ದಲ್ಲಿ ಜನರು ಸ್ಪಂದಿಸುವ ಕಾಲ ಇದಾಗಿದೆ. ಜನರು ಬದಲಾವಣೆಗಾಗಿ ಕಾಯುತ್ತಿದ್ದಾರೆ ಆತ ಯಾವ ಪಕ್ಷದಡಿ ನಿಂತಿದ್ದಾನೆ ಮುಖ್ಯವಾಗಿ ಇರಲ್ಲ. ರಾಜ್ಯದ 224 ಕ್ಷೇತ್ರದಲ್ಲಿ ಹೊಸ ಮುಖಗಳನ್ನು ಚುನಾವಣೆಯ ಕಣಕ್ಕೆ ಬಿಟ್ಟರೆ ರಾಜ್ಯದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ ಎನ್ನುವ ಅಂಶ ಇಂದಿನ ರಾಜಕಾರಣದಲ್ಲಿ ತಿಳಿದು ಬರುತ್ತದೆ ಎಂದು ಅವರು ಹೇಳಿದರು. ಜನತಾದಳ (ಸಂಯುಕ್ತ) ಉಡುಪಿ ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ನೂತನ ಅಧ್ಯಕ್ಷರಿಗೆ ರಾಜ್ಯಾಧ್ಯಕ್ಷರು ಪದಪ್ರದಾನ ನಡೆಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ಸಂಯುಕ್ತ ಜನತಾದಳ ಹಲವಾರು ಏಳು ಬೀಳುಗಳ ನಡುವೆ ಮತ್ತೆ ಎದ್ದು ನಿಂತಿದೆ. ಈ ಪಕ್ಷ ತೋರಿಕೆಗೆ ಅಲ್ಲಲ್ಲಿ ಕಂಡು ಬಂದರೂ ಪಕ್ಷ ಪ್ರತಿಯೊಬ್ಬನ ಹೃದಯದಲ್ಲಿದೆ ಎನ್ನುವುದಂತೂ ಸತ್ಯ. ಅದು ಯಾವ ಹಂತದಲ್ಲೂ ಪುನುರುತ್ಥಾನ ವಾಗಬಲ್ಲದು. ಒಂದು ಚಿಕ್ಕ ಆಲದ ಬೀಜ ಹೇಗೆ ಬೃಹತ್ ಮರವಾಗಿ ಬೆಳೆಯಲು ಸಾಧ್ಯವಿದೆಯೋ ಹಾಗೇ ಪಕ್ಷ ಅಲ್ಲಲ್ಲಿ ಪ್ರತಿಭಾವಂತ ನಾಯಕರ ಆಲದ ಬೀಜವನ್ನು ಬಿತ್ತಿದಾಗ ಅವರು ಎತ್ತರಕ್ಕೆ ಬೆಳೆದು ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲರು ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಘಟಕ ಮಂಜುಳಾ ಉಮೇಶ್, ಮಾಜಿ ಶಾಸಕ ಬಿ.ಧರ್ಮಪ್ಪ, ಮುಖಂಡರುಗಳಾದ ವೆಂಕಟೇಶಮೂರ್ತಿ, ಮೆಹಬೂಬ್, ಮಂಜುನಾಥ್, ನಾಗರಾಜ ದೇವನಹಳ್ಳಿ, ಅಶ್ವತ್ಥನಾರಾಯಣ,ದ.ಕ.ಜಿಲ್ಲಾಧ್ಯಕ್ಷ ಸುಪ್ರೀತ್ ಪೂಜಾರಿ, ದೊಡ್ಡಣ್ಣ ಶಿವಮೊಗ್ಗ ಜಿಲ್ಲಾಧ್ಯಕ್ಷ ಪ್ರಹ್ಲಾದ್ ಉಪಸ್ಥಿತರಿದ್ದರು.ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.