ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳುತ್ತಿರುವ ಯಾತ್ರೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವಿನ ಶೀತಲ ಸಮರ ಮುಂದುವರಿದಿದೆ.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನಾ ಯಾತ್ರೆಗೆ ಪರ್ಯಾಯವಾಗಿ ಪರಮೇಶ್ವರ್ ನೇತೃತ್ವದಲ್ಲಿ ಡಿ.28ರಿಂದ
ಕಾಂಗ್ರೆಸ್‌ನ ಚುನಾವಣಾ ಯಾತ್ರೆಆರಂಭವಾಗಲಿದ್ದು, ಯಾತ್ರೆಯ ಆರಂಭದ ದಿನಗಳಲ್ಲಿ ನಡೆಯುವ ಸಮಾವೇಶ ಇವರಿಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದನ್ನು ದೃಢಪಡಿಸುತ್ತದೆ.
ಪರಮೇಶ್ವರ್ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯನ್ನು ರಾಜ್ಯದ ಗಡಿ ಭಾಗವಾದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಿಂದ ಆರಂಭಿಸಲು ತೀರ್ಮಾನಿಸಿದ್ದಾರೆ. ಇದೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಾಧನಾ ಯಾತ್ರೆಯೂ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನಡೆಯಲಿದ್ದು, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಇದಕ್ಕೆ ಕಾರಣ ಯಾತ್ರೆಯ ದಿನಾಂಕ ನಿಗದಿ. ಪರಮೇಶ್ವರ್ ಡಿ.28ರಿಂದ 31ರವರೆಗೆ ಮೊದಲ ಹಂತದ ಯಾತ್ರೆ ನಡೆಸಲಿದ್ದು, ಮುಳಬಾಗಿಲು, ಕೆಜಿಎಫ್, ಕೋಲಾರ, ಮಾಲೂರು, ಶಿಡ್ಲಘಟ್ಟ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ನೆಲಮಂಗಲ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ನಿಗದಿಯಾಗಿದೆ. ಡಿ.28ರಂದು ಮುಳಬಾಗಿಲಿನಲ್ಲಿ ಪರಮೇಶ್ವರ್ ಅವರ ಯಾತ್ರೆ ನಡೆದರೆ,ಡಿ.30ರಂದು ಅಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರ ಸಾಧನಾ ಯಾತ್ರೆ ನಡೆಯುತ್ತದೆ. ಅದೇ ರೀತಿ ಡಿ.29ರಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸಮಾವೇಶ ನಡೆಸಿದರೆ, ಡಿ.30ರಂದು ಅದೇ ತಾಲೂಕಿನಲ್ಲಿ ಪರಮೇಶ್ವರ್ ನೇತೃತ್ವದಲ್ಲಿ ಪಕ್ಷದ ವತಿಯಿಂದ ಕೈಗೊಂಡಿರುವ ಯಾತ್ರೆ ಸಮಾವೇಶ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ಪಕ್ಷವನ್ನು ದೂರ ಇಟ್ಟು ಸರ್ಕಾರದ ಸಾಧನಾ ಯಾತ್ರೆ ಮಾಡುತ್ತಿದ್ದರಾದರೂ ಅದರಲ್ಲಿ ಭಾಗವಹಿಸುವ ಬಹುತೇಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು. ಇನ್ನೊಂದೆಡೆ ಪರಮೇಶ್ವರ್ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಘಟಾನುಘಟಿ ನಾಯಕರಾದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫರ್ನಾಂಡೀಸ್, ರೆಹಮಾನ್ ಖಾನ್, ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ಮತ್ತಿತರರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಮುಳಬಾಗಿಲು ಮತ್ತು ಶಿಡ್ಲಘಟ್ಟದ ಯಾತ್ರೆಗಳಿಗೆ ಜನ ಸೇರಿಸುವ ವಿಚಾರದಲ್ಲಿ ಕಾರ್ಯಕರ್ತರ ಮಧ್ಯೆ ಗೊಂದಲ ಉಂಟಾಗುವ ಸಾಧ್ಯತೆ ಕಾಣಿಸಿದೆ.
ಕುರುಡುಮಲೆಯಿಂದ
ಯಾತ್ರೆ ಏಕೆ?
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಗಣಪತಿ ದೇವಸ್ಥಾನವಿದ್ದು, ಇದು ದೇವಮೂಲೆ ಎಂಬುದು ನಂಬಿಕೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರ ಪಾಂಚಜನ್ಯ ಯಾತ್ರೆ ಮತ್ತು 2013ರ ವಿಧಾನಸಭೆ ಚುನಾವಣೆ ವೇಳೆ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಯಾತ್ರೆಗಳು ಇಲ್ಲಿಂದಲೇ ಆರಂಭವಾಗಿ ಯಶಸ್ಸು ಕಂಡಿತ್ತಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಿತ್ತು. ಈ ನಂಬಿಕೆಯಿಂದಲೇ ಪರಮೇಶ್ವರ್ ಅವರು ತಮ್ಮ ನೇತೃತ್ವದ ಪಕ್ಷದಲ್ಲಿ ನಡೆಯುವ ಪಕ್ಷದ ಯಾತ್ರೆಗೆ ಕುರುಡುಮಲೆಯಿಂದಲೇ ಚಾಲನೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.