ಬೆಂಗಳೂರು: ವಿಧಾನಪರಿಷತ್ ಅಭ್ಯರ್ಥಿ ಹಾಗೂ ರಾಜ್ಯಸಭಾ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚರ್ಚೆ ನಡೆಸಿದರು.
ನಾನು ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸುತ್ತಿರುವ ಕುರಿತು ನಡ್ಡಾ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೊಸ ದಾಖಲೆ ಬರೆಯಲಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಭರವಸೆ ನೀಡಿರುವುದಾಗಿ ದಿಲ್ಲಿಯಲ್ಲಿ ವಿಜಯೇಂದ್ರ ಸುದ್ದಿಗಾರರಿಗೆ ಹೇಳಿದರು.
ಸುಮಲತಾ ಪ್ರಧಾನಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಗೃಹ ಸಚಿವ ಅಮಿತ್ ಶಾ ಶನಿವಾರ ಮೈಸೂರಿಗೆ ಬರಲಿ¨ªಾರೆ. ರವಿವಾರ ಮೈಸೂರಿನಲ್ಲಿ ಕೋರ್ ಕಮಿಟಿ ಸಭೆ ನಿಶ್ಚಯವಾಗಿದ್ದು, ಅದರಲ್ಲಿ ಎಲ್ಲವೂ ಚರ್ಚೆ ಆಗಲಿದೆ ಎಂದು ತಿಳಿಸಿದರು.
ಡಾ| ಸುಧಾಕರ್ ಸ್ಪರ್ಧಿಸಲು ಬಯಸಿದರೆ ತಪ್ಪೇನು
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಡಾ| ಕೆ.ಸುಧಾಕರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅಪೇಕ್ಷೆ ಪಟ್ಟರೆ ತಪ್ಪೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಧ್ಯೆ ನಡೆಯುತ್ತಿರುವ ವಾಗ್ವಾದಕ್ಕೆ ಸಂಬಂಧಪಟ್ಟಂತೆ ದಿಲ್ಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಮರುಪ್ರಶ್ನೆ ಹಾಕಿದ್ದಾರೆ. ಬಿಜೆಪಿ ಅಸ್ತಿತ್ವವೇ ಇಲ್ಲದ ಕ್ಷೇತ್ರದಲ್ಲಿ ಸುಧಾಕರ್ ರಾಜೀನಾಮೆ ಕೊಟ್ಟು ಗೆದ್ದು ಬಂದಿದ್ದಾರೆ. ಅಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಬೆಂಬಲಿಸುವುದು ಎಂದರೆ ಹುಡುಗಾಟಿಕೆ ಮಾತಲ್ಲ. ಚುನಾವಣೆಯಲ್ಲಿ ಆಗ ಗೆದ್ದಿದ್ದರು. ಆದರೆ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಆಗಿದೆ. ಅವರು ಲೋಕಸಭಾ ಕ್ಷೇತ್ರದ ಟಿಕೆಟ್ ಅಪೇಕ್ಷೆ ಪಡುವುದು ತಪ್ಪಲ್ಲ. ಬಿಜೆಪಿ ಅಭ್ಯರ್ಥಿ ಬಗ್ಗೆ ಕಾರ್ಯ ಕರ್ತರ ಅಭಿಪ್ರಾಯ ಪಡೆದುಕೊಂಡು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಸುಧಾಕರ್ ಅವರಿಗೆ ಕೊಡಬೇಕು ಅಥವಾ ಕೊಡಬಾರದು ಎಂದು ನಾನು ಹೇಳಿಲ್ಲ ಎಂದರು.