ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವೆ “ರಕ್ತ ರಾಜಕಾರಣ”ದ ಮಾತಿನೇಟು ತೀವ್ರಗೊಂಡಿದೆ. “ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ. ಇದನ್ನು ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ” ಎಂಬ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಾ| ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
ರಕ್ತದಲ್ಲಿ ಬರೆದುಕೊಡುವೆ
ಮೈಸೂರು, ಎ. 26: “ನಾನೂ ರಕ್ತ ದಲ್ಲಿ ಬರೆದುಕೊಡುತ್ತೇನೆ. ಬಿಜೆಪಿ ಸರಕಾರ ಯುವಕರು, ವರ್ತಕರು ಸಹಿತ ಎಲ್ಲರಿಗೂ ಮೋಸ ಮಾಡಿದೆ. ಈ ಚುನಾವಣೆಯಲ್ಲಿ 40 ಸೀಟು ಪಡೆ ದರೆ ನಾವು 150 ಸ್ಥಾನ ಗೆಲ್ಲುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರು ಗೇಟು ನೀಡಿ ದರು. “ಜಗದೀಶ್ ಶೆಟ್ಟರ್ ಸೋಲುತ್ತಾರೆ ಎಂಬುದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ” ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಡಿಕೆಶಿ ಹೀಗೆ ಪ್ರತಿಕ್ರಿಯಿಸಿದರು. ಸೋಲಿಸುವುದು ಬಿಡುವುದು ಆಮೇಲೆ, ಮೊದಲು ಬಿಜೆಪಿ ಸರಕಾರದ ಸಾಧನೆಯನ್ನು ಹೇಳಲಿ. ಮಿಸ್ಟರ್ ಯಡಿಯೂರಪ್ಪ ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಹೇಳಿ ಎಂದು ಪ್ರಶ್ನಿಸಿದರು.
ನಾನೂ ಬರೆದುಕೊಡ್ತೇನೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೇರಲು ಸಾಧ್ಯವಿಲ್ಲ . ಅವರು ಹೇಳಿದಂತೆ ನಾನೂ ಅದೇ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸಚಿವ ಡಾ| ಕೆ.ಸುಧಾಕರ್ ಟಾಂಗ್ ನೀಡಿದರು. ಈ ಚುನಾವಣೆ ಬಳಿಕ ಕಾಂಗ್ರೆಸ್ ಶಾಶ್ವತವಾಗಿ ಮುಳುಗುವ ದೋಣಿಯಾಗಲಿದೆ. ಡಿ.ಕೆ. ಶಿವಕುಮಾರ್ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರುವ ದಿನಗಳು ದೂರವಿಲ್ಲ. ಬಿಜೆಪಿ ಸ್ವತಂತ್ರವಾಗಿ ಸರಕಾರ ರಚಿಸಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅಭ್ಯರ್ಥಿಗಳೂ ಸಿಗುವುದಿಲ್ಲ ಎಂದರು.
ರಕ್ತ ಕೊರತೆಯಾದೀತು: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಚುನಾವಣೆಯ ಸೋಲು- ಗೆಲುವು, ಅಧಿಕಾರಕ್ಕೆ ಬರುವ ಬಗ್ಗೆ ಯಾರೂ ರಕ್ತದಲ್ಲಿ ಬರೆದುಕೊಡಬೇಡಿ, ರಕ್ತದ ಕೊರತೆಯಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರು ತ್ತದೆ ಎಂದು ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದುಕೊಡುತ್ತೇನೆ ಎನ್ನುತ್ತಾರೆ. ಮತ್ತೂಂದೆಡೆ ಜಗದೀಶ್ ಶೆಟ್ಟರ್ ಸೋಲುತ್ತಾರೆ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಇಬ್ಬರೂ ರಕ್ತ ದಲ್ಲಿ ಬರೆದುಕೊಡುವುದು ಬೇಡ ಎಂದರು.