Advertisement

ವೀರಶೈವ ಮಹಾಸಭಾದ 8 ಜಿಲ್ಲಾ ಘಟಕಕ್ಕೆ ಚುನಾವಣೆ

11:11 PM Aug 24, 2019 | Lakshmi GovindaRaj |

ಕಲಬುರಗಿ: ಇಷ್ಟು ದಿನ ಒಳಗೊಳಗಿನ ಒಪ್ಪಂದದ ಮೇರೆಗೆ ನೇಮಕವಾಗುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಗಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ವೀರಶೈವ ಹಾಗೂ ಲಿಂಗಾಯತರ ನಡುವಿನ ತಾತ್ವಿಕ ವಿಚಾರ, ಭಿನ್ನಾಭಿಪ್ರಾಯ, ಚರ್ಚೆ ಹಾಗೂ ಪ್ರತ್ಯೇಕ ಧರ್ಮದ ಹೋರಾಟದ ನಡುವೆ ಈ ಚುನಾವಣೆ ಎದುರಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

Advertisement

ಅಖಿಲ ಭಾರತ ವೀರಶೈವ ಮಹಾಸಭೆಯ ಬೆಳಗಾವಿ, ಕಲಬುರಗಿ, ಬೆಂ. ಗ್ರಾಮಾಂತರ, ಶಿವಮೊಗ್ಗ, ಹಾಸನ, ರಾಮನಗರ, ರಾಯಚೂರು, ತುಮಕೂರು ಜಿಲ್ಲಾ ಘಟಕಗಳಿಗೆ ಸೆ.29ಕ್ಕೆ ಚುನಾವಣೆ ನಡೆಯಲಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಘಟಕ, ರಾಜ್ಯ ಘಟಕಕ್ಕೆ ಹಾಗೂ ಮೈಸೂರು, ಧಾರವಾಡ, ಬೆಂಗಳೂರು, ದಾವಣಗೆರೆ, ಬೀದರ ಜಿಲ್ಲಾ ಘಟಕಗಳಿಗೆ ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿ ಚುನಾವಣೆ ನಡೆದಿದೆ.

ಯಾವ ಜಿಲ್ಲೆಯಲ್ಲಿ ಮಹಾಸಭೆಗೆ ಒಂದು ಸಾವಿರ ಸದಸ್ಯರಾಗಿದ್ದಾರೋ ಆ ಜಿಲ್ಲೆಗಳಲ್ಲಿ ಚುನಾವಣೆ ನಡೆಸ ಲಾಗುತ್ತಿದೆ. ವಿಶೇಷವೆಂದರೆ, ಕೆಲವೊಂದು ಜಿಲ್ಲೆಯಲ್ಲಿ ಲಕ್ಷಾಂತರ ವೀರಶೈವರಿದ್ದರೂ ಒಂದು ಸಾವಿರ ಸದಸ್ಯತ್ವವೂ ಆಗಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಹಲವು ದಶಕಗಳಿಂದ 980 ಸದಸ್ಯರು ಮಾತ್ರ ಇದ್ದಾರೆ.

ಎಲ್ಲಿ 1 ಸಾವಿರ ಸದಸ್ಯರಾಗಿರುತ್ತಾರೆಯೋ ಅಲ್ಲಿ ಚುನಾವಣೆ ನಡೆಸಬೇಕಾಗುತ್ತದೆ ಎಂದು ತಿಳಿದು ಮಹಾಸಭೆಗೆ ಹೊಸದಾಗಿ ಸದಸ್ಯರನ್ನೇ ಮಾಡಿರಲಿಲ್ಲ. ಇದೇ ತೆರನಾದ ಪರಿಸ್ಥಿತಿ ಎಲ್ಲ ಜಿಲ್ಲೆಗಳಲ್ಲಿತ್ತು. ಆದರೆ, ವೀರಶೈವ-ಲಿಂಗಾಯತರ ನಡುವೆ ಆಚಾರ- ವಿಚಾರದಲ್ಲಿ ಭಿನ್ನಮತದ ವಿಚಾರ ತಾರಕಕ್ಕೇರಿದ್ದರಿಂದ ಮಹಾಸಭಾದಲ್ಲಿ ತೀವ್ರ ಸಂಚಲನವಾಗಿ ಸದಸ್ಯತ್ವಕ್ಕೆ ಚಾಲನೆ ನೀಡಲಾಗಿದೆ.

ವಾರದೊಳಗೆ ಅಧಿಸೂಚನೆ: ಎಂಟು ಜಿಲ್ಲಾ ಘಟಕಗಳ ಜತೆಗೆ 35 ತಾಲೂಕು ಘಟಕಗಳಿಗೂ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸ ಲಾಗುತ್ತಿದ್ದು, ವಾರದೊಳಗೆ ಅಧಿಸೂಚನೆ ಹೊರ ಬೀಳುವ ಸಾಧ್ಯತೆಗಳಿವೆ. ಸೆ.14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಸೆ.19ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಚುನಾವಣೆ ಸೆ.29ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆದು, ನಂತರ ಮತಗಳ ಎಣಿಕೆ ನಡೆಯಲಿದೆ.

Advertisement

ಜಿಲ್ಲಾಧ್ಯಕ್ಷ, 30 ಕಾರ್ಯಕಾರಿಣಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲಾಗುತ್ತಿದೆ. 30 ಕಾರ್ಯಕಾರಿಣಿ ಸದಸ್ಯ ಸ್ಥಾನಗಳಲ್ಲಿ 10ನ್ನು ಮಹಿಳೆ ಯರಿಗೆ ಮೀಸಲಿರಿಸಲಾಗಿದೆ. ಕಾರ್ಯಕಾರಿಣಿಗೆ ಆಯ್ಕೆಯಾಗುವ ಸದಸ್ಯರು ಮೊದಲ ಸಭೆಯಲ್ಲಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನಗಳನ್ನು ಅಂತಿಮಗೊಳಿಸುತ್ತಾರೆ.

ಜಾಗತಿಕ ಲಿಂಗಾಯತ ಮಹಾಸಭಾ ಚುನಾವಣೆಯಿಂದ ದೂರ: ಅಖಿಲ ಭಾರತ ವೀರಶೈವ ಮಹಾಸಭಾ ಘಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೆಸರು ಮಾಡಿದ್ದ ಹಾಗೂ ವಿಚಾರದಲ್ಲಿ ತಾತ್ವಿಕ ಭಿನ್ನಾಭಿಪ್ರಾಯದಿಂದ ಪರಸ್ಪರ ಒಗ್ಗೂಡದೆ ಭಿನ್ನ ಹಾದಿಗಳಲ್ಲಿ ಮುನ್ನಡೆಯುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾದವರು ಈ ಚುನಾವಣೆಯಿಂದ ದೂರು ಉಳಿದು, ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿದ್ದಾರೆ. ಹಲವರು ಮಹಾಸಭಾದ ಸದಸ್ಯತ್ವ ಹೊಂದಿ, ಮತದಾನದ ಹಕ್ಕು ಪಡೆದಿದ್ದರಿಂದ ಚುನಾವಣೆ ನಡೆದರೆ ಬಂದು ಮತದಾನ ಮಾಡುತ್ತೇವೆ. ಆದರೆ, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ಕಣದಲ್ಲಿ ಯಾರ್ಯಾರು?: ಹೈದ್ರಾಬಾದ್‌-ಕರ್ನಾಟಕ ವಿಭಾಗೀಯ ಕೇಂದ್ರ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. 980 ಇದ್ದ ಸದಸ್ಯರ ಸಂಖ್ಯೆ ಒಮ್ಮೇಲೆ ನಾಲ್ಕು ಸಾವಿರಕ್ಕೆ ಹೆಚ್ಚಳವಾಗಿದ್ದರಿಂದ ಈಗ ಚುನಾವಣೆ ವಿಷಯವೇ ಸದ್ದು ಮಾಡುತ್ತಿದೆ. ಚುನಾವಣೆ ನಡೆಯುತ್ತದೆಯೋ ಇಲ್ಲವೋ, ಅವಿರೋಧ ಆಯ್ಕೆ ನಡೆಯುತ್ತದೆಯೋ ಎನ್ನುವುದನ್ನು ಈಗಲೇ ಹೇಳಲು ಬಾರದಂತಹ ಪರಿಸ್ಥಿತಿಯಿದೆ. ಹಾಲಿ ಅಧ್ಯಕ್ಷ ಅರುಣಕುಮಾರ ಪಾಟೀಲ ಮತ್ತೂಮ್ಮೆ ಅಧ್ಯಕ್ಷರಾಗಲು ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.

ಅದೇ ರೀತಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ ಅವರು ಅಧ್ಯಕ್ಷರಾಗಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭೆಗೆ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ಮಾಜಿ ಮೇಯರ್‌ ಶರಣು ಮೋದಿ, ವೈದ್ಯರಾದ ಡಾ| ಎಸ್‌.ಎಸ್‌. ಪಾಟೀಲ, ಇನ್ನೊಬ್ಬ ಮಾಜಿ ಮೇಯರ್‌ ಧರ್ಮಪ್ರಕಾಶ ಪಾಟೀಲ, ಹೋರಾಟಗಾರ ಎಂ.ಎಸ್‌. ಪಾಟೀಲ ನರಬೋಳಿ ಅಧ್ಯಕ್ಷರಾಗಲು ಉತ್ಸುಕತೆ ಹೊಂದಿದ್ದಾರೆ ಎನ್ನಲಾಗಿದೆ.

ಅಖಿಲ ಭಾರತ ವೀರಶೈವ ಮಹಾ ಸಭಾದ 8 ಜಿಲ್ಲಾ ಘಟಕಗಳ ಅಧ್ಯ ಕ್ಷರ ಆಯ್ಕೆಯ ಚುನಾವಣೆಗೆ ಸಂಬಂಧಿ ಸಿದಂತೆ ವಾರದೊಳಗೆ ಅಧಿಸೂಚನೆ ಹೊರಡಿಸಲಾಗುವುದು. ಈಗಾಗಲೇ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಒಂದು ಸಾವಿರಕ್ಕಿಂತ ಹೆಚ್ಚು ಸದಸ್ಯರು ಇರುವ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
-ಎಚ್‌.ಎಂ.ರೇಣುಕಪ್ರಸನ್ನ, ಮುಖ್ಯ ಚುನಾವಣಾಧಿಕಾರಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next