ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ರಾಜಕೀಯ ಪಕ್ಷಗಳಿಂದ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿ ಆಗುತ್ತಲೇ ಇದ್ದು, ಇಲ್ಲಿವರೆಗೂ ಜಿಲ್ಲೆಯಲ್ಲಿ ಮತದಾರರಿಗೆ ಹಂಚಲು ಸಾಗಾಟ ಮಾಡುತ್ತಿದ್ದ 3 ಕೋಟಿಗೂ ಅಧಿಕ ಬೆಲೆ ಬಾಳುವ ವಸ್ತುಗಳು ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ.
ಚುನಾವಣೆ ಘೋಷಣೆಗೂ ಮೊದಲೇ ಮತದಾರರಿಗೆ ಸಾಕಷ್ಟು ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ರೂಪದಲ್ಲಿ ಹಂಚಿಕೆ ಮಾಡಿರುವ ಅಭ್ಯರ್ಥಿಗಳು, ಆಕಾಂಕ್ಷಿಗಳು, ಇದೀಗ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇನ್ನಷ್ಟು ಅಕ್ರಮಗಳಿಗೆ ಮುಂದಾಗಿರುವುದ್ದಕ್ಕೆ ದಿನ ನಿತ್ಯ ವರದಿ ಆಗುತ್ತಿರುವ ಪ್ರಕರಣಗಳೇ ಸಾಕ್ಷಿ.
ಕಾರ್ಯಾಚರಣೆ: ಮಾದರಿ ನೀತಿ ಸಂಹಿತೆ ಪಾಲಿಸಿ ಎಂಬ ಜಿಲ್ಲಾಡಳಿತದ ಮನವಿಗೆ ಕ್ಯಾರೆ ಎನ್ನದೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕದ್ದುಮುಚ್ಚಿ ಮತದಾರರಿಗೆ, ಕಾರ್ಯಕರ್ತರಿಗೆ ನೀಡಲು ಖರೀದಿಸಿದ್ದ ಅಪಾರ ಪ್ರಮಾಣದ ಮದ್ಯ, ಸೀರೆ ಹಾಗೂ ಮೂಗುನತ್ತುಗಳನ್ನು ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಚಿನ್ನ, ಸೀರೆ ವಶ: ಚುನಾವಣೆಗೆ ಮುಹೂರ್ತ ನಿಗದಿಗೊಂಡ 13 ದಿನಗಳಲ್ಲಿ ಅಪಾರ ಪ್ರಮಾಣದ ಅಕ್ರಮ ಮದ್ಯ, ಚಿನ್ನ, ಸೀರೆ, ಪಕ್ಷಗಳಿಗೆ ಸೇರಿದ ಬಾವುಟ, ಕರಪತ್ರ ವಶಪಡಿಸಿಕೊಳ್ಳಲಾಗಿದೆ. ಬಾಗೇಪಲ್ಲಿ ಟೋಲ್ ಬಳಿ 2 ಕೋಟಿಗೂ ಅಧಿಕ ಮೊತ್ತದ 5 ಕೆ.ಜಿ.ಚಿನ್ನವನ್ನು ವಶಕ್ಕೆ ಪಡೆದಿದ್ದರೆ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಲ್ಲಿ ಸಾವಿರಾರು ಸೀರೆಗಳನ್ನು ದಾಖಲೆ ಇಲ್ಲದೇ ಸಾಗಿಸುವ ವೇಳೆ ವಶಕ್ಕೆ ಪಡೆಯಲಾಗಿದೆ.
ನಿತ್ಯವೂ ದಾಳಿ, ನಗದು, ವಸ್ತುಗಳ ವಶ: ಜಿಲ್ಲೆಯಲ್ಲಿ ನಿತ್ಯವೂ ಒಂದಲ್ಲ ಒಂದು ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುವ ಮದ್ಯ, ಬೆಲೆ ಬಾಳುವ ವಸ್ತುಗಳು ಪತ್ತೆ ಆಗುತ್ತಿವೆ. ಹದ್ದಿನ ಕಣ್ಣಿಟ್ಟು ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿ ಸುವ ಪ್ರತಿ ವಾಹನವನ್ನು ಭದ್ರತಾ ಪೊಲೀಸರು ವಾಹನಗ ಳನ್ನು ತಪಾಸಣೆ ಮಾಡುವ ವೇಳೆ ಹೇರಳ ಪ್ರಮಾಣದಲ್ಲಿ ಬಚ್ಚಿಟ್ಟುಕೊಂಡು ಹೋಗುತ್ತಿದ್ದ ದಾಖಲೆ ಇಲ್ಲದ ನಗದು, ಚಿನ್ನ ಸಿಗುತ್ತಿದೆ. ಅಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ, ಪಕ್ಷಗಳು ರಂಗೋಲಿ ಕೆಳಗೆ ನುಸುಳುತ್ತಿವೆ. 17 ಚೆಕ್‌ಪೋಸ್ಟ್,33 ಫ್ಲಯಿಂಗ್ ಸ್ಕ್ಯಾಡ್ ಜಿಲ್ಲಾದ್ಯಂತ ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬರೋಬ್ಬರಿ 17 ಚೆಕ್‌ಪೋಸ್ಟ್‌ಗಳನ್ನು (ಎಸ್‌ಎಸ್‌ಟಿ) ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿ ಹದ್ದಿನ ಕಣ್ಣಿಟ್ಟಿದ್ದು, ತಪಾಸಣೆಗಾಗಿ 3 ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಿದೆ. 103 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿದೆ.
ಫ್ಲಯಿಂಗ್ ಸ್ಕ್ಯಾಡ್ ಗಳನ್ನು ರಚಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ತಲಾ 1 ವಿಡಿಯೋ ವಿಜಿಲೆನ್ಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜತೆಗೆ ಮಾಧ್ಯಮಗಳ ಮೇಲೆಯು ಕಣ್ಣಿಟ್ಟಿರುವ ಜಿಲ್ಲಾಡಳಿತ ಮಾಧ್ಯಮ ನಿರ್ವಹಣಾ ಸೆಲ್ ಜೊತೆಗೆ ಮಾಧ್ಯಮ ಸ್ಪಷ್ಟೀಕರಣ ಹಾಗೂ ನಿರ್ವಹಣಾ ಸಮಿತಿಗಳನ್ನು ರಚಿಸಿ ರಾಜಕೀಯ ಪಕ್ಷಗಳ ಪರ ಭಿತ್ತರಗೊಳ್ಳುವ ಸುದ್ದಿಗಳ ಮೇಲೆಯೂ ಹದ್ದಿನಕಣ್ಣು ಇಡಲಾಗಿದೆ.
ಮದ್ಯ, ಡ್ರಗ್ಸ್ ಹೆಚ್ಚು ಸಾಗಾಟ! : ಆಘಾತಕಾರಿ ಅಂಶ ಎಂದರೆ ಚುನಾವಣೆ ವೇಳೆಯೇ ಜಿಲ್ಲಾದ್ಯಂತ ಅಕ್ರಮ ಮದ್ಯದ ಘಮಲು ಒಂದೆಡೆ ಯಾದರೆ ಯುವ ಜನರನ್ನು ಹಾಳು ಮಾಡುವ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸಾಗಾಟ ಕೂಡ ಕಂಡು ಬಂದಿರುವುದು ಸಹಜವಾಗಿಯೇ ತೀವ್ರ ಆತಂಕವನ್ನು ಉಂಟು ಮಾಡಿದೆ. ವಾಣಿಜ್ಯ ನಗರಿ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕುಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾ ಗುತ್ತಿದ್ದ ಗಾಂಜಾವನ್ನು ಅಪಾರ ಪ್ರಮಾಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
– ಕಾಗತಿ ನಾಗರಾಜಪ್ಪ