ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಪೊಲೀಸರು ಶನಿವಾರ ರೌಡಿಗಳ ಪರೇಡ್ ನಡೆಸಿದರು. ಡಿಸಿಪಿ ಇಶಾಪಂಥ್ ನೇತೃತ್ವದಲ್ಲಿ ಕೋರಮಂಗಲದಲ್ಲಿರುವ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ 390ಕ್ಕೂ ಅಧಿಕ ರೌಡಿಗಳ ಪರೇಡ್ ನಡೆಯಿತು.
ಚುನಾವಣೆ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು. ಅಲ್ಲದೆ, ಒಂದು ವೇಳೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದರೆ, ಚುನಾವಣೆ ವೇಳೆ ಮತದಾರರ ಮೇಲೆ ದೌರ್ಜನ್ಯ ಎಸಗಿದರೆ ಕಠಿಮ ಕ್ರಮಕೈಗೊಳ್ಳುವುದಾಗಿ ಡಿಸಿಪಿ ಇಶಾಪಂಥ್ ಖಡಕ್ ಎಚ್ಚರಿಕೆ ನೀಡಿದರು.
ಕೋರಮಂಗಲ, ಮಡಿವಾಳ, ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಮೈಕೋಲೇಔಟ್, ತಿಲಕ್‌ನಗರ, ಸೇರಿ 13 ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ಅವರಿಂದ ಕೆಲ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ರೌಡಿಗಳು ಕಾರ್ಯ ರ್ನಿಹಿಸುತ್ತಿರುವ ಉದ್ಯೋಗ, ವಾಸಿಸುವ ವಿಳಾಸ, ದೂರವಾಣಿ ಸಂಖ್ಯೆ, ಸಂಬಂಧಿಕರ ವಿವರ, ಇತರೆ ಮಾಹಿತಿ ಸಂಗ್ರಹಿಸಿಲಾಯಿತು.
ಈಶಾನ್ಯ ವಿಭಾಗದಲ್ಲೂ ರೌಡಿ ಪರೇಡ್: ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ತಮ್ಮ ವ್ಯಾಪ್ತಿಯ 439 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು.