Advertisement

ಕೈಗೆ ರಾಜಸ್ಥಾನ; ಮಧ್ಯಪ್ರದೇಶ, ಛತ್ತೀಸ್‌ಗಢ 50-50

06:00 AM Dec 08, 2018 | Team Udayavani |

ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ ಗೆಲುವು ಖಚಿತ
ಮಿಜೋರಾಂನಲ್ಲಿ ಎಂಎನ್‌ಎಫ್ಗೆ ಮುನ್ನಡೆ 
 ಡಿ. 11ಕ್ಕೆ ಎಲ್ಲ ರಾಜ್ಯಗಳ ಫ‌ಲಿತಾಂಶ ಪ್ರಕಟ

Advertisement

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣ ಫ‌ಲಿತಾಂಶದ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್‌ ನಿಚ್ಚಳ ಗೆಲುವು ಸಾಧಿಸುವ ಸಾಧ್ಯತೆ ಇದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ತೆಲಂಗಾಣದಲ್ಲಿ ಟಿಆರ್‌ಎಸ್‌ ಮತ್ತೂಮ್ಮೆ ಗೆಲುವಿನ ರುಚಿ ಕಾಣಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಉಳಿದಂತೆ ಮಿಜೋರಾಂನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಇಲ್ಲಿ ಎಂಎನ್‌ಎಫ್ ಗೆಲ್ಲುವ ಸಾಧ್ಯತೆ ಇದೆ. 

ಈ ಎಲ್ಲ ರಾಜ್ಯಗಳ ಚುನಾವಣ ಫ‌ಲಿತಾಂಶ ಡಿ.11ಕ್ಕೆ ಪ್ರಕಟವಾಗಲಿದೆ. ರಾಜಸ್ಥಾನ ಮತ್ತು ತೆಲಂಗಾಣ ಬಿಟ್ಟರೆ ಉಳಿದ 3 ರಾಜ್ಯಗಳಲ್ಲಿ ಗೊಂದಲದ ಫ‌ಲಿತಾಂಶವಿದೆ. ಒಂದು ವಾಹಿನಿಯಲ್ಲಿ ಬಿಜೆಪಿ ಮುಂದಿದ್ದರೆ, ಮತ್ತೂಂದರಲ್ಲಿ ಕಾಂಗ್ರೆಸ್‌ ಇದೆ. ಹೀಗಾಗಿ ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನು ಕ್ರೋಡೀಕರಿಸಿ ಹೇಳುವುದಾದರೆ ಕಾಂಗ್ರೆಸ್‌ಗೆ ರಾಜಸ್ಥಾನ ಲಾಭವಾಗಿ ಸಿಗುವ ಎಲ್ಲ ಸಂಭವಗಳಿವೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ತೀವ್ರ ಹಣಾಹಣಿ ಇರುವುದರಿಂದ ಫ‌ಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಅಂತೆಯೇ ತೆಲಂಗಾಣದಲ್ಲಿ ಟಿಡಿಪಿ ಜತೆ “ಕೈ’ ಜೋಡಿ ಸಿದ್ದರೂ ಕೆ.ಸಿ.ಚಂದ್ರಶೇಖರ ರಾವ್‌ ಅವರನ್ನು ಮಣಿಸುವುದು ಅಸಾಧ್ಯ ಎಂಬುದು ಈ ಸಮೀಕ್ಷೆಗಳಿಂದ ಗೊತ್ತಾಗಿದೆ. ಮಿಜೋರಾಂನಲ್ಲಿ ಬಹುವರ್ಷದ ಅನಂತರ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. 

ಮಧ್ಯಪ್ರದೇಶದಲ್ಲಿ  ಮತ್ತೆ ಬಿಜೆಪಿ?
ಸಮೀಕ್ಷೆಗಳ ಪ್ರಕಾರ ಬಿಜೆಪಿ ತುಸು ಮುಂದಿರುವಂತೆ ಕಾಣಿಸುತ್ತಿದೆ. ಹಾಗೆಯೇ 15 ವರ್ಷಗಳ ಬಳಿಕ ಅಧಿಕಾರ ಸಿಗಬಹುದು ಎಂಬ ಆಸೆ ಕಾಂಗ್ರೆಸ್‌ನಲ್ಲಿದೆ. ಟೈಮ್ಸ್‌ನೌ, ಇಂಡಿಯಾ ಟಿವಿ, ರಿಪಬ್ಲಿಕ್‌- ಜನ್‌ಕಿ ಬಾತ್‌ ಬಿಜೆಪಿಗೆ ಮುನ್ನಡೆ ನೀಡಿವೆ. ಇಂಡಿಯಾ ಟುಡೆ ಯಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ಸಮಬಲವಿದೆ. ಎಬಿಪಿ ಮತ್ತು ಸಿವೋಟರ್ಸ್‌-ರಿಪಬ್ಲಿಕ್‌ಗಳು ಕಾಂಗ್ರೆಸ್‌ಗೆ ಮುನ್ನಡೆ ನೀಡಿವೆ. 

ಛತ್ತೀಸ್‌ಗಢಕ್ಕೆ “ರಮಣ’ ಸಾಧ್ಯತೆ 
ಇಲ್ಲೂ ಇಂಡಿಯಾ ಟುಡೆ ಮತ್ತು ರಿಪಬ್ಲಿಕ್‌-ಸೀವೋಟರ್ಸ್‌ ಬಿಟ್ಟರೆ ಉಳಿದೆಲ್ಲ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಮುನ್ನಡೆ ನೀಡಿವೆ. ಹೀಗಾಗಿ ರಮಣ್‌ ಸಿಂಗ್‌ ಆಡಳಿತವನ್ನು ಅಲುಗಾಡಿಸುವುದು ಕಷ್ಟಕರ ಎಂಬುದನ್ನು ಸಮೀಕ್ಷೆಗಳು ಹೇಳುತ್ತಿವೆ. 

Advertisement

ರಾಜೇಗೆ ಮತದಾರ “ಕೈ’?
ರಾಜಸ್ಥಾನದಲ್ಲಿ ಒಂದು ಬಾರಿ ಬಿಜೆಪಿ, ಮತ್ತೂಂದು ಬಾರಿ ಕಾಂಗ್ರೆಸ್‌ ಎಂಬ ಸಂಪ್ರದಾಯವನ್ನು ಈ ಬಾರಿಯೂ ಮತದಾರರು ಮುಂದುವರಿಸಿದಂತೆ ಕಾಣಿಸುತ್ತಿದೆ. ಬಹುತೇಕ ಎಲ್ಲ ವಾಹಿನಿಗಳೂ ಕಾಂಗ್ರೆಸ್‌ಗೆ ಸ್ಪಷ್ಟ ಮುನ್ನಡೆ ನೀಡಿವೆ. ರಿಪಬ್ಲಿಕ್‌-ಜನಕೀ ಬಾತ್‌ ಮಾತ್ರ ತೀವ್ರ ಹಣಾಹಣಿ ಇದೆ ಎಂದು ಹೇಳಿದೆ. 

ಕೆಸಿಆರ್‌ ತಂತ್ರ ಸಫ‌ಲ
ಅವಧಿಗೆ ಮುನ್ನವೇ ಚುನಾವಣೆಗೆ ಹೋಗಿದ್ದ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ ರಾವ್‌ ಅವರ ಆಸೆ ಕೈಗೂಡಿದಂತೆ ಕಾಣಿಸುತ್ತಿದೆ. ಬಹುತೇಕ ಎಲ್ಲ ವಾಹಿನಿಗಳು ತೆಲಂಗಾಣ ರಾಷ್ಟ್ರ ಸಮಿತಿಗೆ ಬಹುಮತ ನೀಡಿವೆ. ರಿಪಬ್ಲಿಕ್‌-ಸೀವೋಟರ್ಸ್‌ ಮಾತ್ರ ನೇರಾನೇರ ಹಣಾಹಣಿ ಇದೆ ಎಂದಿದೆ. ಬಿಜೆಪಿ 5-7ಸ್ಥಾನ ಗಳಿಸುವ ಸಾಧ್ಯತೆ ಇದೆ. 

ಕೈಬಿಟ್ಟಿತೇ ಮಿಜೋರಾಂ
ಇಲ್ಲಿ ಹಾಲಿ ಕಾಂಗ್ರೆಸ್‌ ಸರಕಾರಕ್ಕೆ ಕೊಂಚ ಹಿನ್ನಡೆಯಾದಂತೆ ತೋರುತ್ತಿದೆ. ಇಲ್ಲಿ ವಿಪಕ್ಷ ಎಂಎನ್‌ಎಫ್ ಮುನ್ನಡೆ ಸಾಧಿಸಿಕೊಂಡಿದೆ. ಆದರೆ, ಅತಂತ್ರ ವಿಧಾನಸಭೆ ಸೃಷ್ಟಿಯಾದರೂ ಆಗಬಹುದು ಎಂದು ಸಮೀಕ್ಷೆ ಹೇಳುತ್ತಿದೆ. ಈ ರಾಜ್ಯಕ್ಕೆ ಸಂಬಂಧಿಸಿದಂತೆ ಒಂದು ವಾಹಿನಿ ಮಾತ್ರ ಸಮೀಕ್ಷೆ ನಡೆಸಿದೆ. 

ಸಮೀಕ್ಷೆಗಳ ಸಮೀಕ್ಷೆ  ಫ‌ಲಿತಾಂಶ
ಮಧ್ಯಪ್ರದೇಶ
ಒಟ್ಟು  230
ಬಹುಮತಕ್ಕೆ 116
ಬಿಜೆಪಿ 110     ಕಾಂಗ್ರೆಸ್‌ 109    ಇತರ 11

ರಾಜಸ್ಥಾನ
ಒಟ್ಟು  199
ಬಹುಮತಕ್ಕೆ 100
ಬಿಜೆಪಿ 78     ಕಾಂಗ್ರೆಸ್‌ 110    ಇತರ 11

ಛತ್ತೀಸ್‌ಗಢ
ಒಟ್ಟು  90
ಬಹುಮತಕ್ಕೆ 46
 ಬಿಜೆಪಿ 41     ಕಾಂಗ್ರೆಸ್‌ 42    ಇತರ 7

ತೆಲಂಗಾಣ 
ಒಟ್ಟು  119
ಬಹುಮತಕ್ಕೆ 60
ಬಿಜೆಪಿ 5  ಕಾಂಗ್ರೆಸ್‌ 39  ಟಿಆರ್‌ಎಸ್‌ 67   ಇತರ 8

ಮಿಜೋರಾಂ 
ಒಟ್ಟು  40 
ಬಹುಮತಕ್ಕೆ 21   
ಕಾಂಗ್ರೆಸ್‌ 16    ಎಂಎನ್‌ಎಫ್  18   ಇತರ 6  

Advertisement

Udayavani is now on Telegram. Click here to join our channel and stay updated with the latest news.

Next