Advertisement
ನಿತೀಶ್ ಅವರ ಪಟ್ನಾದ ನಿವಾಸದಲ್ಲಿ ರವಿವಾರ ನಡೆದ ಜೆಡಿಯು ಬಿಹಾರ ಕಾರ್ಯಕಾರಿಣಿಯಲ್ಲಿ ಪ್ರಶಾಂತ್ ಕಿಶೋರ್‌ರನ್ನು ಶಾಲು ನೀಡಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಬಳಿಕ ಅವರು ಸಿಎಂ ನಿತೀಶ್ ಪಕ್ಕವೇ ಆಸೀನರಾದರು. ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಶಾಂತ್ “ಬಿಹಾರದಿಂದಲೇ ಹೊಸ ಜೀವನ ಆರಂಭಿಸುತ್ತಿದ್ದೇನೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತಿದೆ’ ಎಂದು ಬರೆದುಕೊಂಡಿದ್ದರು. ಸದ್ಯಕ್ಕೆ ಅವರಿಗೆ ಯಾವುದೇ ಹೊಣೆ ನೀಡದೇ ಇದ್ದರೂ ಬಿಹಾರದ ಬಕ್ಸಾರ್ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದೆ.
ಲೋಕಸಭೆ ಚುನಾವಣೆಗಾಗಿ ಬಿಜೆಪಿ-ಜೆಡಿಯು ನಡುವೆೆ ಗೌರವಯುತ ಸ್ಥಾನ ಹಂಚಿಕೆ ನಡೆದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಅವರು ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲವಿದೆ ಎಂಬ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಬಿಜೆಪಿ 20, 12 ಸ್ಥಾನ ಜೆಡಿಯು, 6 ಎಲ್‌ಜೆಪಿ, ಕೇಂದ್ರ ಸಚಿವ ಉಪೇಂದ್ರ ಖುಶ್ವಾಹ ಪಕ್ಷಕ್ಕೆ 2 ಸ್ಥಾನ ಎಂದು ನಿಗದಿಯಾಗಿದ್ದ ಬಗ್ಗೆ ಕೆಲ ಸಮಯದ ಹಿಂದೆ ಹಲವು ಸುದ್ದಿವಾಹಿನಿಗಳು ವರದಿ ಮಾಡಿದ್ದವು.