Advertisement

ಚುನಾವಣೆ ಸಿಬ್ಬಂದಿ ಸಮಸ್ಯೆ ಕೇಳೋರ್ಯಾರು?

03:32 PM May 02, 2023 | Team Udayavani |

ಚನ್ನರಾಯಪಟ್ಟಣ: ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಪ್ರಜಾಪ್ರಭುತ್ವದ ಹಬ್ಬವೇ ಸರಿ. ಆದರೇ ಈ ಹಬ್ಬವನ್ನು ಮತದಾರರು ಸಂಭ್ರಮಿಸಿ ಜವಾಬ್ದಾರಿ ಯುವ ಸರ್ಕಾರ ರಚನೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಮತದಾರರ ಕರ್ತವ್ಯ. ಆದರೇ ಈ ಹಬ್ಬದ ಸಂಭ್ರಮದಲ್ಲೂ ಕೆಲವೊಂದು ನ್ಯೂನ್ಯತೆಗಳಿವೆ. ಅದೇನು ಅಂತ ತಿಳಿಯೋಣ ಬನ್ನಿ.

Advertisement

ಚುನಾವಣೆ ಬಂತೆಂದರೆ ರಾಜಕೀಯ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಹಾಗೂ ಅಭ್ಯರ್ಥಿಗಳಿಗೆ ಭಯದ ಜ್ವರ ಶುರುವಾಗುವುದು ಸಾಮಾನ್ಯ. ಆದರೆ, ಮತದಾನದ ಸಮಯ ಸಮೀಪಿಸಿತೆಂದರೆ ಚುನಾವಣೆಗೆ ನಿಯೋಜನೆಗೊಂಡ ಶಿಕ್ಷಕರಿಗೆ ಒಂದು ರೀತಿ ಭಯ ಶುರುವಾಗುತ್ತೆ. ಕಾರಣ ಚುನಾವಣೆಗೆ ನೇಮಕವಾಗಿರುವ ಅನೇಕ ಮಂದಿ ಶಿಕ್ಷಕರು ಮತ್ತು ಇತರ ಸರ್ಕಾರಿ ಇಲಾಖೆ ಸಿಬ್ಬಂದಿ ಚುನಾವಣಾ ಕರ್ತವ್ಯದಿಂದ ಹೊರಗೆ ಉಳಿಯಲು ಬಯಸುತ್ತಾರೆ. ಕಾರಣ ಆರೋಗ್ಯದ ಸಮಸ್ಯೆ, ಸೌಲಭ್ಯದ ಕೊರತೆ, ಕೊಡುವ ಗೌರವ ಧನವೂ ಏನಕ್ಕೂ ಸಾಲದಾಗಿದೆ. ಚುನಾವಣ ಸಿಬ್ಬಂದಿಗೆ ಕನಿಷ್ಠ ಸೌಕ ರ್ಯವಿಲ್ಲದೇ ನಡೆಸಿಕೊಳ್ಳೋದು ಗ್ರಾಮೀಣ ಭಾಗ ದಲ್ಲಿ ಹೆಚ್ಚು. ಅದರಂತೆ ಕೆಲವೆಡೆ ನಗರದಲ್ಲೂ ಸೇವಾ ಸೌಲಭ್ಯದ ಕೊರತೆ ಎದುರಿಸಬೇಕಾಗಿರೋದು ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ಪರಿ ಪಾಡಾಗಿದೆ.

ಹಾಗಾಗಿಯೇ ಚುನಾವಣಾ ಕರ್ತವ್ಯ ಎಂದರೇ ಶಿಕ್ಷಕರು ಅದರಲ್ಲೂ ಮಹಿಳಾ ಶಿಕ್ಷಕರು, ಸಿಬ್ಬಂದಿ ಮಾರುದ್ದ ದೂರ ಉಳಿಯುತ್ತಾರೆ.

ಎಷ್ಟು ಮಂದಿ ನೇಮಕ: ಶ್ರವಣಬೆಳಗೊಳ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು ತಲಾ ನಾಲ್ವರು ಕಾರ್ಯ ನಿರ್ವಹಿಸಿದರೆ ಪೊಲೀಸ್‌, ಸಿಆರ್‌ಪಿಎಫ್ ಹಾಗೂ ಗೃಹ ರಕ್ಷದಳದಿಂದ ಇಬ್ಬರು ಹಾಜರಿರಲಿದ್ದಾರೆ. ಹೆಚ್ಚುವರಿಯಾಗಿ 120 ಮಂದಿ ಸೇವೆ ತೆಗೆದುಕೊಳ್ಳಲಾಗಿದೆ. ಸುಮಾರು 1892 ಮಂದಿ ಸೇವೆ ಸಲ್ಲಿಸಲಿದ್ದಾರೆ. ಈವರಿಗೆ ಈಗಾಗಲೇ ನಿಯೋಜನೆಗೊಂಡಿರುವ ಎಲ್ಲರಿಗೂ ತರಬೇತಿ ನೀಡಲಾಗಿದೆ. ಕೆಲವರು ಗೈರಾಗಿದ್ದಾರೆ.

ಎಷ್ಟು ಮಂದಿ ಕಾರಣ ನೀಡಿದ್ದಾರೆ: ತಾಲೂಕು ಆಡಳಿತದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದಾಗಿ 1192 ಮಂದಿ ಶಿಕ್ಷಕರಿಗೆ ತಿಳಿವಳಿಕೆ ಪತ್ರ ನೀಡಿದ್ದಾರೆ. ಅವರಲ್ಲಿ ಕೆಲವರು ನೇರವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದರೆ, ಇನ್ನೂ ಕೆಲವವರು ಅರ್ಜಿಯನ್ನ ಕುಟುಂಬದ ಇತರ ಸದಸ್ಯರೊಂದಿಗೆ ಕಳುಹಿಸಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿ ದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸುಮಾರು 20ಕ್ಕೂ ಹೆಚ್ಚು ಮಂದಿ ಚುನಾವಣಾ ಸೇವೆಯಿಂದ ವಿರಾಮ ನೀಡುವಂತೆ ಮನವಿ ಮಾಡಿದ್ದಾರೆ.

Advertisement

ಕಳ್ಳಾಟದ ನೆಪ ಬೇಡ: ಇನ್ನೂ ಕೆಲ ಶಿಕಕ್ಷಕರು ನೀಡಿ ರುವ ಕಾರಣ ಮಾತ್ರ ಗಂಭೀರವಾಗಿಲ್ಲ. ಕೆಲವು ವಿವಾಹ, ಗೃಹಪ್ರವೇಶ ವಿವಿಧ ಕಾರ್ಯಕ್ರಮದ ನೆಪ ನೀಡಿದರೇ ಇನ್ನೂ ಕೆಲವರು ಸಣ್ಣಪುಟ್ಟ ಅನಾರೋಗ್ಯದ ಕಾರಣ ನೀಡಿದ್ದಾರೆ. ಇಷ್ಟು ದಿನ ಆರೋಗ್ಯವಾಗಿದ್ದ ಶಿಕ್ಷಕರು ಚುನಾವಣೆ ಕರ್ತವ್ಯ ಎದುರಾದ ತಕ್ಷಣ ದಿಢೀರ್‌ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗಂಭೀರ ಕಾರಣ: ಹೃದಯ ರೋಗವಿದೆ ನಿತ್ಯ ಮಾತ್ರೆ ಸೇವನೆ ಮಾಡಲಾಗುತ್ತಿದೆ. ಹೃದಯ ಚಿಕಿತ್ಸೆ ಮಾಡಿಸಲಾಗಿದೆ, ಸಂಬಂಧಿಕರು ಮರಣ ಹೊಂದಿದ್ದಾರೆ, ತಿಥಿ ಕಾರ್ಯ ಮಾಡಬೇ ಕಾಗಿದೆ ಹೀಗೆ ಗಂಭೀರ ಕಾರಣಗಳನ್ನು ನೀಡಲಾಗಿದೆ.

ಬೇಸಿಗೆ ರಜೆ ಮಜೆಯಲ್ಲಿದ್ದಾರೆ: ಈಗಾಗಲೇ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಣೆಯಾಗಿದೆ. ಎಲ್ಲಾ ಶಿಕ್ಷಕರು ರಜೆಯ ಮಜೆದಲ್ಲಿದ್ದು, ಚುನಾವಣಾ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೇ 9ರಂದು ಇವಿಎಂ ಪಡೆದು ಮತಗಟ್ಟೆಗೆ ತೆರಳಿ ಅಲ್ಲಿಯೇ ಉಳಿದು ಮರು ದಿವಸ ಮತದಾನ ಪ್ರಕ್ರಿಯೆಯಲ್ಲಿ ಕೆಲಸ ಮಾಡಿ, ರಾತ್ರಿ ಇವಿಎಂಗಳನ್ನು ಹಿಂತಿರುಗಿಸಿ ಮನೆ ಸೇರುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ. ಜತೆಗೆ ಸರ್ಕಾರ ನೀಡುವ ಗೌರವಧನ ಯಾವುದಕ್ಕೂ ಸಾಲುವುದಿಲ್ಲ ಎಂಬ ಕಾರಣಕ್ಕೆ ತಮ್ಮ ಹೊಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಶಿಫಾರಸು ಪತ್ರ ಹಿಡಿದು ಅಲೆದಾಟ: ಕೆಲ ಶಿಕ್ಷಕರು ಈಗಾಗಲೆ ಹೈಡ್ರಾಮಾ ಶುರು ಮಾಡಿದ್ದು ಅನಾರೋಗ್ಯದ ಸರ್ಟಿಫಿಕೇಟ್‌ ಹಿಡಿದು ಚುನಾವಣಾಧಿಕಾರಿ ಕಚೇರಿಗೆ ತರಳಿ ಮನವಿ ಮಾಡುವುದಲ್ಲದೆ, ಅಧಿಕಾರಿಗಳು ಒಬ್ಬರೇ ಎಲ್ಲಿ ಸಿಗುತ್ತಾರೆ ಎಂದು ಅಧಿಕಾರಿಗಳು ಸುತ್ತುವ ಕಾರಿನ ಹಿಂದೆ ಅಲೆಯುತ್ತಿದ್ದಾರೆ. ಇಷ್ಟು ಜನ ವೈಯಕ್ತಿಕ ಸಮಸ್ಯೆ ಹೇಳಿಕೊಳ್ಳುತ್ತಿರುವುದಲ್ಲದೆ ಶಾಸಕರು-ಸಚಿವರು ಹೀಗೆ ತಮ್ಮಗೆ ಪರಿಚಯವಿರುವ ರಾಜಕಾರಣಿಗಳ ಮನೆ ಬಾಗಿಲು ಸವೆಸುತ್ತಿದ್ದು ಚುನಾವಣಾ ಕೆಲಸದಿಂದ ತಪ್ಪಿಸಿಕೊಳ್ಳಲು ಶಿಫಾರಸು ನಡೆಸುತ್ತಿದ್ದಾರೆ.

ತಾಲೂಕು ಆಡಳಿತಕ್ಕೆ ತಲೆನೋವು: ಚುನಾವಣಾ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಶಿಕ್ಷಕರ ಬಗ್ಗೆ ಈಗಾಗಲೇ ಚುನಾವಣಾ ತಾಲೂಕು ಆಡಳಿತ ಸಮಗ್ರ ಮಾಹಿತಿ ಪಡೆದಿದೆ, ಎಚ್‌ಆರ್‌ಎಂಎಸ್‌ ತಂತ್ರಾಂಶದ ಮೂಲಕವೇ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡಿದೆ. ಸರ್ಕಾರಿ ವೇತನ ನೀಡುವ ಈ ತಂತ್ರಾಂಶದೊಂದಿಗೆ ಸಂಬಂಧಿಸಿದ ಇಲಾಖೆಯಿಂದಲೂ ಫೀಡ್‌ಬ್ಯಾಕ್‌ ಪಡೆದು ಶಿಕ್ಷಕರನ್ನು ಆಯೋಗ ನೇಮಿಸಿಕೊಂಡಿದೆ. ಗರ್ಭಿಣ, ಬಾಣಂತಿ, ಅನಾರೋಗ್ಯದಿಂದ ಬಳಲುತ್ತಿ ರುವವರು ಹೀಗೆ ಅನೇಕ ಸಮಸ್ಯೆ ಹೇಳಿಕೊಂಡು ಬರುವವರನ್ನು ದೂರವೇ ಇಟ್ಟಿದೆ. ಈಗಾಗಲೆ ಆಯ್ಕೆಗೊಂಡಿರುವ ಶಿಕ್ಷಕರು ಸಹ ಅನಾರೋಗ್ಯದ ಪತ್ರ ಹಿಡಿದು ಆಯೋಗದ ಮುಂದೆ ನಿಲ್ಲುತ್ತಿರುವುದು ಆಯೋಗಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸಿಬ್ಬಂದಿಗೆ ಮೂಲ ಸೌಕರ್ಯ ಸಮಸ್ಯೆ ನೀಗಿಸೋದ್ಯಾರು?: ಮತದಾನದ ಹಿಂದಿನ ದಿನ ಗ್ರಾಮೀಣ ಭಾಗದ ಶಾಲೆಯಲ್ಲಿ ರಾತ್ರಿ ತಂಗಬೇಕಿದೆ. ರಾತ್ರಿ ವೇಳೆ ಸೊಳ್ಳೆ ಕಾಟ, ಶೌಚ ಗೃಹವಿದ್ದರೂ ನೀರಿನ ಸಮಸ್ಯೆ. ನಿತ್ಯ ಕರ್ಮ ಮುಗಿಸಲು ತೊಂದರೆ. ಊಟ, ಉಪಾಹಾರ ಸಮಸ್ಯೆ. ಈ ಸಮಸ್ಯೆ ತಾಲೂಕಿನ ಹಿರೀಸಾವೆ, ನುಗ್ಗೇಹಳ್ಳಿ, ದಂಡಗಿನಹಳ್ಳಿ ಹೋಬಳಿ ಗಡಿಭಾಗದಲ್ಲಿ ಹೆಚ್ಚಾಗಿದೆ. ಇಂತಹ ಸ್ಥಳಕ್ಕೆ ನಿಯೋಜನೆ ಆದರೆ ಸಮಸ್ಯೆ ಎದುರಿಸಬೇಕಿದ್ದು ಆನಾರೋಗ್ಯದ ನೆಪ ಹೇಳಿ ಚುನಾವಣಾ ಕರ್ತವ್ಯದಿಂದ ಹೊರಗೆ ಉಳಿಯುವುದೇ ಲೇಸು ಅನ್ನೋದು ಶಿಕ್ಷಕರ ಯೋಜನೆಯಾಗಿದೆ. ಹಾಗಾಗಿ ಇಂತಹ ಸಮಸ್ಯೆಗಳು ಎದುರಾಗದಂತೆ ಚುನಾವಣಾ ಆಯೋಗ ಸಿಬ್ಬಂದಿ ಪರ ಕಾಳಜಿ ವಹಿಸಬೇಕಾಗಿದೆ.

ಚುನಾವಣೆ ಸೇವೆಯಲ್ಲಿ ತೊಡಗಲು ಸಾಧ್ಯವಿಲ್ಲ ಎಂದು ಶಿಕ್ಷಕರು ನೀಡುವ ಪತ್ರ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಯಾರು ಆರೋಗ್ಯದ ಸಮಸ್ಯೆ ಹೇಳಿದ್ದಾರೆ ಅವರನ್ನು ತಾಲೂಕು ಆರೋಗ್ಯ ಅಧಿಕಾರಿ ಮೂಲಕ ತಪಾಸಣೆ ಮಾಡಿ ಆರೋಗ್ಯದ ಸಮಸ್ಯೆ ಇರುವವರನ್ನು ಮಾತ್ರ ವರದಿ ನೀಡುವಂತೆ ಜಿಲ್ಲಾಡಳಿತ ತಿಳಿಸಿದೆ. – ಗೋವಿಂದರಾಜು, ತಹಶೀಲ್ದಾರ್‌  

-ಶಾಮಸುಂದರ್‌ ಕೆ ಅಣ್ಣೇನಹಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next