Advertisement
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆ ಕೇಂದ್ರದ ಬಳಿ ಭಾರೀ ಜನದಟ್ಟಣೆ ಇಲ್ಲದ ವಾತಾವರಣ ಶಾಂತವಾಗಿತ್ತು. ಮುಂಜಾನೆಯಿಂದ ಆರಂಭವಾದ ಮತ ಎಣಿಕೆ ವೇಳೆ ಬೆರಳಣಿಕೆಯಷ್ಟು ಮಂದಿ ಸುಳಿದಾಡಿದರೂ, ಮಧ್ಯಾಹ್ನದ ನಂತರ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಸಿಹಿ ಹಂಚಿ ಸಂತೋಷ ವಿನಿಮಯ ಮಾಡಿಕೊಂಡರು.
Related Articles
Advertisement
ಮದುವೆಗೆ ಬಾರದ ಜನ: ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆ ಕೇಂದ್ರದ ಪಕ್ಕದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯ ನಡೆಯುತ್ತಿತ್ತು. ಆದರೆ, ಮತ ಎಣಿಕೆ ಕೇಂದ್ರದ ಸುತ್ತ ನೂರು ಮೀಟರ್ ನಿಷೇಧಾಜ್ಞೆ ಇದ್ದ ಕಾರಣ, ಸುತ್ತಲಿನ ಎಲ್ಲಾ ರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರಿಂದ ಮದುವೆಗೆ ಬರುವ ವಾಹನಗಳಿಗೆ ಸಮಸ್ಯೆ ಎದುರಾಗಿತ್ತು.
ಜೊತೆಗೆ ಸಾಕಷ್ಟು ಮಂದಿ ಚುನಾವಣೆ ಫಲಿತಾಂಶದ ಕಾರಣದಿಂದ ಮದುವೆ ಮನೆಯಿಂದ ದೂರ ಉಳಿದಿದ್ದರು. ಒಂದೂವರೆ ಸಾವಿರ ಮಂದಿಗೆ ಅಡುಗೆ ಮಾಡಿಸಿದ್ದರೂ, ಇನ್ನೂ ಸಾವಿರ ಮಂದಿ ಊಟ ಮಾಡುವಷ್ಟು ಆಹಾರ ಹಾಗೆಯೇ ಉಳಿದಿತ್ತು.
ಪ್ರವಾಸಿಗರ ಸಂಖ್ಯೆ ಕ್ಷೀಣ: ಗುರುವಾರ ಲೋಕಸಭಾ ಚುನಾವಣೆ ಫಲಿತಾಂಶವಿದ್ದ ಕಾರಣ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ನಗರದ ಎಲ್ಲಾ ರಸ್ತೆ, ಉದ್ಯಾನ, ಪ್ರಾಣಿ ಸಂಗ್ರಹಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ ಸೇರಿ ಅನೇಕ ಪ್ರವಾಸಿ ತಾಣಗಳು ಜನರಿಲ್ಲದೇ ಬಣಗುಡುತ್ತಿದ್ದವು. ಫಲಿತಾಂಶ ಹೊರಬರುವ ಮುನ್ನವೇ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು.